ಶ್ರೀರಂಗಪಟ್ಟಣ: ಪಟ್ಟಣ ಸಮೀಪದ ಚಂದ್ರವನ ಆಶ್ರಮ ಮತ್ತು ಬೇಬಿ ಮಠದಿಂದ ಕೊಡಮಾಡುವ 2025ನೇ ಸಾಲಿನ ‘ಕಾವೇರಿ ಪ್ರಶಸ್ತಿ’ಯನ್ನು ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಅವರಿಗೆ ಬುಧವಾರ ಶಿಲ್ಲಾಂಗ್‌ನಲ್ಲಿ ಪ್ರದಾನ ಮಾಡಿದರು.
‘ನವರಾತ್ರಿ ಸಂದರ್ಭದಲ್ಲಿ ಕೊಡಮಾಡುವ ರಾಷ್ಟ್ರ ಮಟ್ಟದ ಕಾವೇರಿ ಪ್ರಶಸ್ತಿಗೆ ಆಯ್ಕೆ ಸಮಿತಿಯು ಸಿ.ಎಚ್. ವಿಜಯಶಂಕರ್ ಅವರನ್ನು ಆಯ್ಕೆ ಮಾಡಿತ್ತು. ಆಶ್ರಮದಲ್ಲಿ ಅ.3ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಾರಣಾಂತರಗಳಿಂದ ಸಿ.ಎಚ್. ವಿಜಯಶಂಕರ್ ಬರಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಮೇಘಾಲಯಕ್ಕೆ ಬಂದು ₹50 ಸಾವಿರ ನಗದು ಮತ್ತು ಸ್ಮರಣಿಕೆ ಒಳಗೊಂಡ ರಾಷ್ಟ್ರ ಮಟ್ಟದ ಕಾವೇರಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ’ ಎಂದು ಸ್ವಾಮೀಜಿ ತಿಳಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಿ.ಎಚ್. ವಿಜಯಶಂಕರ್, ‘ಚಂದ್ರವನ ಆಶ್ರಮದ ಬಗ್ಗೆ ಅಪಾರ ಭಕ್ತಿ ಮತ್ತು ಗೌರವವಿದೆ. ಶತಾಯುಷಿಗಳಾಗಿದ್ದ ಲಿಂಗೈಕ್ಯ ಮರಿದೇವರು ಶಿವಯೋಗಿ ಸ್ವಾಮೀಜಿ ಸ್ಥಾಪಿಸಿದ ಬೇಬಿ ಮಠ ಮತ್ತು ಚಂದ್ರವನ ಆಶ್ರಮ ತ್ರಿವಿಧ ದಾಸೋಹದ ಮೂಲಕ ಕರ್ನಾಟದಾದ್ಯಂತ ಹೆಸರು ಮಾಡಿದೆ. ಅಂತಹ ಕ್ಷೇತ್ರದಿಂದ ಪ್ರಶಸ್ತಿ ಪಡೆಯುತ್ತಿರುವುದು ಹರ್ಷ ತಂದಿದೆ’ ಎಂದರು.
ಮೇಘಾಲಯದ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ, ಉಪ ಮುಖ್ಯಮಂತ್ರಿ ಪಿ. ತೈನಸಂಗ್, ಸಚಿವರಾದ ಮ್ಯಾರಿಕೋಸ್ ಮಾರ್ಕ್, ಡಾ.ಪಿ. ಶಕೀರ್ ಅಹಮದ್, ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿ ಬ್ರಹ್ಮದತ್ ತಿವಾರಿ, ಚಂದ್ರವನ ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.