ADVERTISEMENT

ಮಂಡ್ಯ| ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ನಿರ್ಮಾಣ: ಶಾಸಕ

ಶಿಲ್ಪಿ ಅರುಣ್‌ ಯೋಗಿರಾಜ್‌ರಿಂದ ಪ್ರತಿಮೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 5:49 IST
Last Updated 9 ಜನವರಿ 2026, 5:49 IST
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ಪಿ.ರವಿಕುಮಾರ್‌ ಸ್ಥಳ ಪರಿಶೀಲಿಸಿದರು. ಶಿಲ್ಪಿ ಅರುಣ್‌ ಯೋಗಿರಾಜ್‌, ಉದ್ಯಮಿ ರಮೇಶ್‌, ಅನುಪಮಾ ಪಾಲ್ಗೊಂಡಿದ್ದರು 
ಮಂಡ್ಯ ನಗರದ ಸಂಜಯ ವೃತ್ತದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪನೆ ಸಂಬಂಧ ಶಾಸಕ ಪಿ.ರವಿಕುಮಾರ್‌ ಸ್ಥಳ ಪರಿಶೀಲಿಸಿದರು. ಶಿಲ್ಪಿ ಅರುಣ್‌ ಯೋಗಿರಾಜ್‌, ಉದ್ಯಮಿ ರಮೇಶ್‌, ಅನುಪಮಾ ಪಾಲ್ಗೊಂಡಿದ್ದರು    

ಮಂಡ್ಯ: ನಗರದ ಸಂಜಯ ವೃತ್ತದಲ್ಲಿ ₹2 ಕೋಟಿ ವೆಚ್ಚದಲ್ಲಿ 26 ಅಡಿ ಎತ್ತರದ ಆಕರ್ಷಕ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಪಿ. ರವಿಕುಮಾರ್ ತಿಳಿಸಿದರು.

ನಗರದ ಜೆ.ಸಿ. ವೃತ್ತದಲ್ಲಿ ಗುರುವಾರ ಶಿಲ್ಪಿ ಅರುಣ್ ಯೋಗಿರಾಜ್ ಅವರೊಂದಿಗೆ ಸ್ಥಳ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಇದೀಗ ನನಸಾಗುತ್ತಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾನ ₹2 ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲಾಗುತ್ತಿದೆ ಎಂದರು.

ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಕೆತ್ತನೆ ಮಾಡಿರುವ ಶಿಲ್ಪಿ ಅರುಣ್ ಯೋಗೀರಾಜ್ ಅವರಿಂದಲೇ ಕೆಂಪೇಗೌಡರ ಪ್ರತಿಮೆಯನ್ನೂ ನಿರ್ಮಿಸಬೇಕೆಂಬ ಸಂಕಲ್ಪ ಬಹುತೇಕರಲ್ಲೂ ಇತ್ತು. ಅದನ್ನು ಈಗ ಸಾಕಾರ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿದ್ದೇವೆ. ಪ್ರತಿಮೆ ಸ್ಥಾಪನೆಯಾದ ಬಳಿಕ ಮಂಡ್ಯಕ್ಕೆ ವಿಶೇಷ ಮೆರುಗು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪಂಚಲೋಹದ ಪ್ರತಿಮೆ:

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ವನದಲ್ಲಿ ನಿರ್ಮಿಸಿರುವ ಡಾ.ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ಪ್ರತಿಮೆಗಳು ಪ್ಲಾಸ್ಟಿಕ್‍ನಿಂದ ಕೂಡಿದ್ದು, ಈ ಎರಡೂ ಪ್ರತಿಮೆಗಳನ್ನೂ ಪಂಚಲೋಹದಿಂದ ನಿರ್ಮಿಸಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದರು.‌

ನಗರದ 100 ಅಡಿ ರಸ್ತೆಗೆ ಹೆಸರಿಡುವ ಕುರಿತಂತೆ ವಿವಾದ ಉಂಟಾಗಿತ್ತು. ನಾನು ಶಾಸಕನಾದ ನಂತರ ಅದಕ್ಕೆ ನಾಡಪ್ರಭು ಕೆಂಪೇಗೌಡ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಹೆಸರನ್ನು ಇಡುವ ಮೂಲಕ ವಿವಾದವನ್ನು ಬಗೆಹರಿಸಿರುವುದಾಗಿ ತಿಳಿಸಿದರು.

‘ನಾನು ಶಾಸಕನಾದ ಮೇಲೆ ಮಂಡ್ಯ ನಗರದ ಪ್ರತಿ ರಸ್ತೆಗಳು, ವೃತ್ತಗಳು, ಪುಟ್‍ಪಾತ್‍ಗಳನ್ನು ಅಭಿವೃದ್ದಿ ಮಾಡಿದ್ದೇನೆ. ಈಗಾಗಲೆ ಕೆಲವೆಡೆ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಕೆಲವು ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು.

ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ನಗರಭೆ ಮಾಜಿ ಅಧ್ಯಕ್ಷ ಎಚ್.ಎಸ್. ಮಂಜು, ಮಾಜಿ ಸದಸ್ಯ ಕೆ.ಸಿ. ರವೀಂದ್ರ, ರಮೇಶ್, ಅನುಪಮಾ ಹಾಜರಿದ್ದರು.

ತಾಯಿ ಊರು ಮಂಡ್ಯ: ಶಿಲ್ಪಿ ಅರುಣ್‌ 

ಸ್ಥಳ ಪರಿಶೀಲನೆ ನಡೆಸಿದ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ ‘ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲು ನನ್ನನ್ನು ಆಹ್ವಾನಿಸಿದ್ದರು. ಇದೀಗ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅಂತರರಾಷ್ಟ್ರೀಯ ಹೆಸರು ಪಡೆದಿರುವ ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಮಾಡಿರುವ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಹಳ ಅರ್ಥಪೂರ್ಣವಾಗಿ ಕೆಂಪೇಗೌಡರ ಪ್ರತಿಮೆಯನ್ನು ಮಾಡಿಕೊಡಲಾಗುವುದು’ ಎಂದು ಹೇಳಿದರು. ನಮ್ಮ ತಾಯಿಯವರೂ ಸಹ ಮಂಡ್ಯದ ಮುಟ್ಟನಹಳ್ಳಿಯವರು. ಹಾಗಾಗಿ ನಮಗೂ ಸಹ ಮಂಡ್ಯದ ಬಗ್ಗೆ ವಿಶೇಷವಾದ ಪ್ರೀತಿ ಇದೆ. ಇದೊಂದು ಅವಕಾಶ ನೀಡಿರುವುದು ನನ್ನ ಭಾಗ್ಯ ಎಂದು ಭಾವಿಸುತ್ತೇನೆ ಎಂದರು.

‘₹5 ಕೋಟಿ ಮೊತ್ತದಲ್ಲಿ ವೃತ್ತಗಳ ಅಭಿವೃದ್ಧಿ’

ಮಂಡ್ಯದ ಪ್ರಮುಖ ವೃತ್ತಗಳನ್ನು ₹5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದ್ದು ನಗರದ ಜೆ.ಸಿ. ವೃತ್ತವನ್ನು ₹2 ಕೋಟಿ ವೆಚ್ಚದಲ್ಲಿ ವಿಶೇಷವಾಗಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. ಅಲ್ಲದೆ ಹೊಸಹಳ್ಳಿ ವೃತ್ತವನ್ನು ₹1 ಕೋಟಿ ವೆಚ್ಚದಲ್ಲಿ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೇವೆ ಎಂದು ಶಾಸಕ ಪಿ.ರವಿಕುಮಾರ್‌ ಹೇಳಿದರು.  ಬೆಂಗಳೂರು-ಮೈಸೂರು ಹೆದ್ದಾರಿಯ ಸಕ್ಕರೆ ವೃತ್ತವನ್ನು ₹2 ಕೋಟಿ ಹಾಗೂ ಹೊಳಲು ವೃತ್ತವನ್ನು ಸಹ ವಿಶೇಷವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ನಕ್ಷೆ ತಯಾರಿಸಿ ಕೆಲಸ ಪ್ರಾರಂಭವಾದ ಮೇಲೆ ಇದರ ಮಹತ್ವ ಬದಲಾವಣೆಯಾಗುವುದನ್ನು ಜನತೆ ನೋಡಬಹುದಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.