ADVERTISEMENT

Kikkeramma Devi Festival: ವಿಜೃಂಭಣೆಯ ಕಿಕ್ಕೇರಮ್ಮ ದೇವಿ ಹಬ್ಬ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:59 IST
Last Updated 20 ಜುಲೈ 2025, 2:59 IST
ಕಿಕ್ಕೇರಿಯಲ್ಲಿ ಶುಕ್ರವಾರ ರಾತ್ರಿ ಕಿಕ್ಕೇಮರಮ್ಮನವರ ಹಬ್ಬ ಸಂಭ್ರಮ ಸಡಗರದಿಂದ ಜರುಗಿತು
ಕಿಕ್ಕೇರಿಯಲ್ಲಿ ಶುಕ್ರವಾರ ರಾತ್ರಿ ಕಿಕ್ಕೇಮರಮ್ಮನವರ ಹಬ್ಬ ಸಂಭ್ರಮ ಸಡಗರದಿಂದ ಜರುಗಿತು   

ಕಿಕ್ಕೇರಿ: ಪಟ್ಟಣದ ಅದಿದೇವತೆ ಕಿಕ್ಕೇರಮ್ಮ ದೇವಿ ಹಬ್ಬ ವಿಜೃಂಭಣೆಯಿಂದ ಶುಕ್ರವಾರ ರಾತ್ರಿ ನೆರವೇರಿತು.
ದೇವಿಗೆ ಆರತಿ ಸೇವೆ ಮಾಡಲು ಮಹಿಳೆಯರು ತಂಬಿಟ್ಟಿನಿಂದ ರಾಗಿ ದೀವಿಗೆ ತಯಾರಿಸಿಕೊಂಡು ಹಬ್ಬದಲ್ಲಿ ಭಾಗಿಯಾದರು.

ಪುಷ್ಪಗಳಿಂದ ರಾಗಿ ದೀವಿಗೆ ನಿರ್ಮಿಸಿಕೊಂಡ ಭಕ್ತ ಮಹಿಳೆಯರು ಪಟ್ಟಣದ ರಾಜಬೀದಿಗಳಾದ ಅಂಗಡಿಬೀದಿ, ಕೋಟೆ ಆಂಜನೆಯ ಬೀದಿ, ಹೊಸಬೀದಿಯಲ್ಲಿ ಸಾಗಿ ಬಂದಮ್ಮನ ಗುಡಿಯ ಬಳಿ ದೇವಿಯ ಮಡೆಯ ಪೂಜೆ ಸಲ್ಲಿಸಿದರು. ನಂತರ ಹೊರವಲಯದಲ್ಲಿರುವ ಕಿಕ್ಕೇರಮ್ಮನ ಗುಡಿಗೆ ಸಂಭ್ರಮದಿಂದ ಮಡೆಯ ಮೆರವಣಿಗೆ ಸಾಗಿತು.

ಯುವತಿಯರು, ಗ್ರಾಮ ಮುಖಂಡರು ದೇವಿಯ ಮಡೆಯೊಂದಿಗೆ ಸಾಗುತ್ತ ದೇವಿಗೆ ಜೈಕಾರ ಹಾಕುತ್ತ ತಮಟೆ ನಾದದೊಂದಿಗೆ ಸಾಗಿದರು. ದಾರಿಯುದ್ದಕ್ಕೂ ಪಂಜಿನ ಆರತಿ ಸೇವೆಯನ್ನು ಮಾಡಲಾಯಿತು.

ADVERTISEMENT

ಮಡಿವಾಳ ಸಮುದಾಯದವರು ಶುಭ್ರ ಬಟ್ಟೆಯನ್ನು ಉದ್ದಕ್ಕೂ ಹಾಸಿದರು. ಮಡಿ ಬಟ್ಟೆಯ ಮೇಲೆ ತಂಬಿಟ್ಟಿನ ಆರತಿ ಇಟ್ಟು ಪೂಜಿಸಲಾಯಿತು. ನಂತರ ಕಿಕ್ಕೇರಮ್ಮ ದೇವಿಯ ಗದ್ದುಗೆ ನಿರ್ಮಿಸಿ ಗ್ರಾಮಸ್ಥರು ತಂದಿದ್ದ ಪೂಜಾ ಸಾಮಗ್ರಿಯೊಂದಿಗೆ ಪೂಜಿಸಲಾಯಿತು. ದೇವಿಗೆ ಕುಂಕುಮ, ಅರಿಸಿನದಿಂದ ಶೃಂಗರಿಸಿ ಧೂಪ ಹಾಕಲಾಯಿತು. ಬಾಳೆಹಣ್ಣು, ತಂಬಿಟ್ಟು, ಚಿಗಣಿ ಮತ್ತಿತರ ವಸ್ತುಗಳನ್ನು ನೈವೇದ್ಯವಾಗಿ ಇಡಲಾಯಿತು. ಕುರಿ ಬಲಿ ನೀಡಿ ದೇವಿಗೆ ಹರಕೆ ಸಮರ್ಪಿಸಿದರು.

ಭಕ್ತರಿಗೆ ಚಿಗಣಿ, ತಂಬಿಟ್ಟು, ಹಣ್ಣು, ಕಾಯಿ ಪ್ರಸಾದವಾಗಿ ವಿನಿಯೋಗ ಮಾಡಲಾಯಿತು. ಮುಖಂಡರು, ಯುವಕರು, ಮಹಿಳೆಯರು ಸಂಭ್ರಮದಿಂದ ಜಾತಿಭೇದ ಮರೆತು ಭಾಗವಹಿಸಿದ್ದರು.

ಕಿಕ್ಕೇರಿಯಲ್ಲಿ ಶುಕ್ರವಾರ ರಾತ್ರಿ ಕಿಕ್ಕೇಮರಮ್ಮನವರ ಹಬ್ಬ ಸಂಭ್ರಮ ಸಡಗರದಿಂದ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.