
ಕೃಷಿ ಮೇಳದ ಲಾಂಛನ
ಮಂಡ್ಯ: ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಮೂರು ದಿನ ಆಯೋಜಿಸಿರುವ ‘ಕೃಷಿ ಮೇಳ–2025’ ವಿ.ಸಿ.ಫಾರಂ ಸಜ್ಜಾಗಿದೆ. ಡಿ.5ರಿಂದ 7ರವರೆಗೆ ನಡೆಯಲಿರುವ ಈ ಮೇಳದಲ್ಲಿ ವಿವಿ ವ್ಯಾಪ್ತಿಯ ಐದು ಜಿಲ್ಲೆಗಳ ಸಾವಿರಾರು ರೈತರು ಪಾಲ್ಗೊಳ್ಳಲಿದ್ದಾರೆ.
ಮೇಳದಲ್ಲಿ 350ರಿಂದ 400 ವಿವಿಧ ಬೆಳೆಗಳ ತಳಿ ಪರಿಚಯಿಸಲಾಗುತ್ತಿದೆ. ವಸ್ತುಪ್ರದರ್ಶನದಲ್ಲಿ ಒಟ್ಟು 350 ಮಳಿಗೆಗಳನ್ನು ತೆರೆಯಲಾಗಿದೆ. ರೈತರಿಗೆ ಎಲ್ಲ ರೀತಿಯ ಮಾಹಿತಿಗಳು ಒಂದೇ ಸೂರಿನಡಿ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
ನವೀನ ಕೃಷಿ ತಂತ್ರಜ್ಞಾನಗಳ ಪ್ರದರ್ಶನ, ವಸ್ತು ಪ್ರದರ್ಶನ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಪದ್ಧತಿ ಪ್ರಾತ್ಯಕ್ಷಿಕೆಗಳು, ಪಶು ಸಂಗೋಪನೆ ತಾಂತ್ರಿಕತೆಗಳು, ಮೀನು ಕೃಷಿ, ಸಸ್ಯ ಕ್ಷೇತ್ರ ನಿರ್ವಹಣೆಯಲ್ಲಿ ಪ್ರಮುಖವಾಗಿ ದೇಸಿ ಮತ್ತು ವಿದೇಶಿ ತಳಿಗಳ ಬಗ್ಗೆ ಮಾಹಿತಿ, ಮಾರಾಟ ಮತ್ತು ಪ್ರದರ್ಶನ, ರೇಷ್ಮೆ ಕೃಷಿ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆ, ಬಹುಬೆಳೆ ಪದ್ಧತಿ, ಸಮುದಾಯ ಕೃಷಿ, ಗುತ್ತಿಗೆ ಆಧಾರದ ಕೃಷಿ, ಜೈವಿಕ ಕೃಷಿ, ನೀರಾವರಿ ಪದ್ಧತಿಗಳು, ಕಾಫಿ ಮತ್ತು ಸಾಂಬಾರ ಬೆಳೆಗಳ ತಂತ್ರಜ್ಞಾನಗಳು, ಕಬ್ಬು ಬೆಳೆಯಲ್ಲಿ ತರಗು ಮುಚ್ಚಿಗೆಯ ಪ್ರಾತ್ಯಕ್ಷಿಕೆ ಕೃಷಿ ಮೇಳದಲ್ಲಿ ಮೇಳೈಸಲಿವೆ.
ನೂತನ ತಳಿಗಳ ಪ್ರದರ್ಶನ
2024-25ನೇ ಸಾಲಿನಲ್ಲಿ ಬಿಡುಗಡೆಯಾದ ಸಿಎಸ್‌ವಿ-27 ಧಾನ್ಯ ಜೋಳದ ತಳಿ, ಕೆ.ಬಿ.ಎಸ್.ಎಚ್-78 ಸೂರ್ಯಕಾಂತಿ ಸಂಕರಣ ತಳಿ, ಚಾಮರಾಜನಗರ ಕಪ್ಪು ಅರಿಶಿನ ತಳಿ (ಸಿ.ಎಚ್.ಎನ್.ಬಿ.ಟಿ.-1), ಐ.ಐ.ಎಸ್.ಆರ್. ಪ್ರತಿಭಾ ಎಂಬ ಅರಿಸಿನ ತಳಿಯನ್ನು ಕೃಷಿ ಮೇಳದಲ್ಲಿ ರೈತರಿಗೆ ಪರಿಚಯಿಸಲಾಗುವುದು ಎಂದು ಕೃಷಿ ವಿವಿ ಶಿಕ್ಷಣ ನಿರ್ದೇಶಕ ಎನ್.ಶಿವಕುಮಾರ್ ತಿಳಿಸಿದ್ದಾರೆ.
ಇದರ ಜೊತೆಗೆ 2025–26ನೇ ಸಾಲಿನಲ್ಲಿ ಬಿಡುಗಡೆ ಹಂತದಲ್ಲಿರುವ ತಳಿಗಳನ್ನು ಪ್ರದರ್ಶಿಸಲಾಗುವುದು. ಅಧಿಕ ಇಳುವರಿ, ರೋಗ ನಿರೋಧಕ ಶಕ್ತಿ ಹೊಂದಿರುವ ಹೊಸ ತಳಿಗಳು ರೈತರಿಗೆ ಹೆಚ್ಚು ಉಪಯುಕ್ತವಾಗಲಿವೆ ಎಂದರು.
ಸಿರಿಧಾನ್ಯಗಳ ಮೇಳ:
ಕೃಷಿ ಹವಾಮಾನ ನಿರ್ವಹಣೆ, ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಹೈಟೆಕ್ ತೋಟಗಾರಿಕೆ ಪ್ರಾತ್ಯಕ್ಷಿಕೆ, ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು, ಸಿರಿಧಾನ್ಯಗಳ ಮೇಳ, ಜೈವಿಕ ಇಂಧನದ ತಂತ್ರಜ್ಞಾನಗಳು, ಮಾರುಕಟ್ಟೆಯ ತಂತ್ರಗಳು, ಕೃಷಿ ಅರಣ್ಯ, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳು, ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚು ಒತ್ತು ನೀಡಲಾಗಿದೆ.
ಭತ್ತ, ರಾಗಿ, ಕಬ್ಬು ತಳಿ ಅಭಿವೃದ್ಧಿ:
ಭತ್ತದಲ್ಲಿ 45 ತಳಿ, 3 ಹೈಬ್ರಿಡ್, 50 ತಾಂತ್ರಿಕತೆಗಳು, ರಾಗಿಯಲ್ಲಿ 37 ತಳಿಗಳು, ಕಬ್ಬಿನಲ್ಲಿ 17 ತಳಿಗಳು ಮತ್ತು 20 ತಂತ್ರಜ್ಞಾನಗಳು, ಮುಸುಕಿನ ಜೋಳದಲ್ಲಿ 4 ತಳಿಗಳು, ಮೇವಿನ ಬೆಳೆಗಳಲ್ಲಿ 4, ಸೂರ್ಯಕಾಂತಿ ಸಂಕಿರಣ ತಳಿ, ಕೆಬಿಎಸ್‌ಎಚ್-88, ಚಾಮರಾಜನಗರ ಕಪ್ಪು ಅರಿಶಿಣ, ಅರಿಶಿಣದ ತಳಿ- ಐಐಎಸ್‌ಆರ್ ಪ್ರತಿಭಾ ತಳಿಗಳು ಹಾಗೂ ತಾಂತ್ರಿಕತೆಗಳು ಈ ಕೇಂದ್ರದಿಂದ ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸಲಾಗಿದೆ.
ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಪ್ರಾತ್ಯಕ್ಷಿಕೆ ದೇಸಿ ರಾಸುಗಳ ಪ್ರದರ್ಶನ ವಿಸ್ಮಯಕಾರಿ ಕೀಟ ಪ್ರಪಂಚ, ಫಲಪುಷ್ಪ ಪ್ರದರ್ಶನ
ಕೃಷಿ ಮೇಳಕ್ಕೆ ಸಿಎಂ ಚಾಲನೆ ಇಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್ 5ರಂದು ಮಂಡ್ಯ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಲ್ಲನಾಯಕ ಕಟ್ಟೆ ಗ್ರಾಮದ ಹೆಲಿಪ್ಯಾಡ್‌ಗೆ ಆಗಮಿಸಿ ಮಂಡ್ಯ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳ-2025 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ನಂತರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30 ಗಂಟೆಗೆ ಮಲ್ಲನಾಯಕನ ಕಟ್ಟೆ ಹೆಲಿಪ್ಯಾಡ್ ಮೂಲಕ ಎಚ್.ಎ.ಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ.
60 ಎಕರೆಯಲ್ಲಿ ಕೃಷಿ ದರ್ಶನ
ವಿ.ಸಿ.ಫಾರಂನಲ್ಲಿ ಆಯೋಜಿಸಿರುವ ಕೃಷಿ ಮೇಳದಲ್ಲಿ ಈ ಬಾರಿ 60 ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆದು ರೈತರಿಗೆ ಸಮರ್ಪಕ ಮಾಹಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಬೆಂಗಳೂರಿನ ಕೃಷಿ ಮೇಳದಲ್ಲಿ ನಿರೀಕ್ಷೆಗೂ ಮೀರಿದಂತೆ 7.5 ಲಕ್ಷ ಜನರು ಭಾಗವಹಿಸಿ ಗಮನ ಸೆಳೆದಿದ್ದರೆ ನಮ್ಮ ಮಂಡ್ಯದಲ್ಲಿಯೂ ಸುಮಾರು ಆರು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ಅಂದಾಜಿದೆ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಕೃಷಿ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡಲಾಗುವುದು. ಪ್ರಚಲಿತ ವಿಷಯಗಳ ಆಧಾರದ ಮೇಲೆ ರೈತ ವಿಜ್ಞಾನಿಗಳ ಸಂವಾದ ಕಾರ್ಯಕ್ರಮ ಚರ್ಚಾಗೋಷ್ಠಿಗಳು ತಜ್ಞರಿಂದ ಸಲಹಾ ಸೇವೆಗಳನ್ನು ನೀಡಲಾಗುವುದು. ಐದು ಜಿಲ್ಲೆಗಳಿಂದ ಒಟ್ಟು 10 ಜನ ಜಿಲ್ಲಾ ಮಟ್ಟದ ಪ್ರಗತಿಪರ ರೈತ ರೈತ ಮಹಿಳೆ ಪ್ರಶಸ್ತಿ ಮತ್ತು 55 ಯುವ ರೈತ ಹಾಗೂ ಯುವ ರೈತ ಮಹಿಳೆಯರಿಗೆ ತಾಲ್ಲೂಕು ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಮುಖ ಆಕರ್ಷಣೆಗಳು
‘ಸಮಗ್ರ ಕೃಷಿ ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳು ನೂತನ ತಳಿಗಳು ಮತ್ತು ತಂತ್ರಜ್ಞಾನಗಳು ಮಣ್ಣು ಮತ್ತು ನೀರು ಸಂರಕ್ಷಣಾ ವಿಧಾನಗಳು ಕಾಫಿ ಮತ್ತು ಸಾಂಬಾರು ಬೆಳೆಗಳ ತಂತ್ರಜ್ಞಾನಗಳು ಹೈಟೆಕ್–ತೋಟಗಾರಿಕೆ ಪ್ರಾತ್ಯಕ್ಷಿಕೆಗಳು ಸುಧಾರಿತ ಮೇವಿನ ತಳಿಗಳು ಮತ್ತು ತಾಂತ್ರಿಕತೆಗಳು ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಕೃಷಿ ಅರಣ್ಯ ಉತ್ಪನ್ನಗಳು ರೇಷ್ಮೆ ಪಶು ಸಂಗೋಪನೆ ಹೈನುಗಾರಿಕೆ ಕುರಿ ಕೋಳಿ ಹಾಗೂ ಮೀನು ಸಾಕಣೆ ಕುರಿತು ಪ್ರಾತ್ಯಕ್ಷಿಕೆ ಕೃಷಿ ಮೇಳದಲ್ಲಿ ಇರಲಿದೆ’ ಎಂದು ಕೃಷಿ ವಿವಿ ವಿಶೇಷಾಧಿಕಾರಿ ಪ್ರೊ.ಕೆ.ಎಂ. ಹರಿಣಿಕುಮಾರ್ ತಿಳಿಸಿದ್ದಾರೆ. ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆ ಔಷಧ ಸಸ್ಯಗಳ ಪ್ರಾತ್ಯಕ್ಷಿಕೆ ದೇಸಿ ರಾಸುಗಳ ಪ್ರದರ್ಶನ ಉಷ್ಣವಲಯ ಮತ್ತು ಅರೆ ಉಷ್ಣವಲಯ ಬೆಳೆಗಳು ಈ ಬಾರಿಯ ಪ್ರಮುಖ ಆಕರ್ಷಣೆಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.