ADVERTISEMENT

ಶ್ರೀರಂಗಪಟ್ಟಣ: ಬೃಂದಾವನದಲ್ಲಿ ನೀರಿನ ಚಿಲುಮೆಗಳು ಭಣ ಭಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:37 IST
Last Updated 17 ಡಿಸೆಂಬರ್ 2025, 6:37 IST
ಶ್ರೀರಂಗಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದಲ್ಲಿ ರಾಧಾ ಕೃಷ್ಣ ಫಾಲ್ಸ್‌ ಜಿಂದು ಹರಿದು ಬರುತ್ತಿದ್ದ ನೀರು ನಿಂತುಹೋಗಿದ್ದು, ನೀರಿನ ತೊಟ್ಟಿಯಲ್ಲಿ ನಾಯಿ ಮಲಗಿರುವುದು
ಶ್ರೀರಂಗಪಟ್ಟಣದ ಪ್ರಸಿದ್ಧ ಪ್ರವಾಸಿ ತಾಣ ಕೆಆರ್‌ಎಸ್‌ ಬೃಂದಾವನದಲ್ಲಿ ರಾಧಾ ಕೃಷ್ಣ ಫಾಲ್ಸ್‌ ಜಿಂದು ಹರಿದು ಬರುತ್ತಿದ್ದ ನೀರು ನಿಂತುಹೋಗಿದ್ದು, ನೀರಿನ ತೊಟ್ಟಿಯಲ್ಲಿ ನಾಯಿ ಮಲಗಿರುವುದು   

ಶ್ರೀರಂಗಪಟ್ಟಣ: ತಾಲ್ಲೂಕಿನ ಪ್ರವಾಸಿ ತಾಣ ಕೆಆರ್‌ಎಸ್‌ನ ಬೃಂದಾವನದಲ್ಲಿ ಮುದ ನೀಡುತ್ತಿದ್ದ ನೀರಿನ ಕಾರಂಜಿಗಳು ನಿಷ್ಕ್ರಿಯಗೊಂಡಿದ್ದು, ಪ್ರವಾಸಿಗರು ನಿರಾಸೆ ಅನುಭವಿಸುತ್ತಿದ್ದಾರೆ.

ಬೃಂದಾವನದ ದಕ್ಷಿಣ ಭಾಗಕ್ಕೆ ಅಣೆಕಟ್ಟೆಯಿಂದ ನೀರು ಸರಬರಾಜು ಮಾಡಲು ನಿರ್ಮಿಸಿರುವ ತೊಟ್ಟಿಯಲ್ಲಿ ಕುಸಿತ ಉಂಟಾಗಿದ್ದು, ಆರೇಳು ದಿನಗಳಿಂದ ರಾಧಾ ಕೃಷ್ಣ ಫಾಲ್ಸ್‌ ಕಡೆಯಿಂದ ಹರಿದು ಬರುತ್ತಿದ್ದ ನೀರಿನ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಚಿಲುಮೆಗಳಿಗೆ ನೀರು ಸರಬರಾಜು ಪ್ರಕ್ರಿಯೆಗೆ ತೊಂದರೆಯಾಗಿದೆ. ನೀರಿನ ಝರಿಗಳು ಸಂಪೂರ್ಣ ಒಣಗಿ ಹೋಗಿವೆ. ನೀರು ಹರಿಯುದ್ದ ಸ್ಥಳ ನಾಯಿಗಳ ಆಡುಂಬೊಲವಾಗಿದೆ.

ಬೃಂದಾವನದ ಈ ಅವ್ಯವಸ್ಥೆಗೆ ಪ್ರವಾಸಿಗರು ಮೂಗು ಮುರಿಯುತ್ತಿದ್ದಾರೆ. ನಾಯಿಗಳ ಓಡಾಟ, ಕಸದ ಗುಡ್ಡೆ, ಒಣಗುತ್ತಿರುವ ಹಸಿರು ಲಾನ್‌ ಮತ್ತು ಗಿಡಗಳು ಬೃಂದಾವನದ ಅಂದಗೆಡಿಸಿವೆ. ನೀರಿನ ಚಿಲುಮೆ ಚಾಲನೆಯಲ್ಲಿ ಇಲ್ಲದಿದ್ದರೂ ₹100 ಶುಲ್ಕ ಪಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

‘ಬೃಂದಾವನ ಪ್ರವೇಶಕ್ಕೆ ₹100 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಆದರೆ ಇಲ್ಲಿನ ಮುಖ್ಯ ಆಕರ್ಷಣೆಯಾದ ನೀರಿನ ಚಿಲುಮೆಗಳು ಸ್ಥಗಿತಗೊಂಡಿದ್ದು ಭಣಗುಡುತ್ತಿವೆ. ನೀರಿನ ಚಿಲುಮೆಯ ಸೌಂದರ್ಯ ಸವಿಯುವ ಅವಕಾಶದಿಂದ ನಮ್ಮ ಮಕ್ಕಳು ವಂಚಿತರಾಗಿದ್ದಾರೆ. ಉದ್ಯಾನದಲ್ಲಿ ಸ್ವಚ್ಛತೆಯೂ ಸರಿಯಾಗಿಲ್ಲ. ನಿರ್ವಹಣೆ ಮಾಡುವಲ್ಲಿ ಕಾವೇರಿ ನೀರಾವರಿ ನಿಗಮದ ವಿಫಲವಾಗಿದೆ’ ಎಂದು ಬೆಂಗಳೂರಿನಿಂದ ಬಂದಿದ್ದ ಪ್ರವಾಸಿ ವೇಣುಗೋಪಾಲ್‌ ಬೇಸರ ವ್ಯಕ್ತಪಡಿಸಿದರು.

‘ಬೃಂದಾವನದ ದಕ್ಷಿಣ ಭಾಗಕ್ಕೆ ಅಣೆಕಟ್ಟೆಯಿಂದ ನೀರು ಸರಬರಾಜು ಮಾಡುತ್ತಿದ್ದ ತೊಟ್ಟಿ ಕುಸಿದಿದೆ. ಇದರಿಂದ ಕಾರಂಜಿಗಳಿಗೆ ನೀರಿನ ಸಂಪರ್ಕ ಕಡಿತಗೊಂಡಿದೆ. ತಾತ್ಕಾಲಿಕವಾಗಿ ವಿದ್ಯುತ್‌ ಚಾಲಿತ ಯಂತ್ರಗಳಿಂದ ನೀರು ಸರಬರಾಜು ಮಾಡುವ ಪ್ರಯತ್ನ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯಲಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.