ADVERTISEMENT

100 ಅಡಿಗೆ ತಲುಪಿದ KRS: 80 ವರ್ಷದಲ್ಲಿ ಮೇನಲ್ಲೇ 4ನೇ ಬಾರಿಗೆ ಅತ್ಯಧಿಕ ನೀರು

ಸಿದ್ದು ಆರ್.ಜಿ.ಹಳ್ಳಿ
Published 31 ಮೇ 2025, 0:25 IST
Last Updated 31 ಮೇ 2025, 0:25 IST
<div class="paragraphs"><p>ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ 100 ಅಡಿ ತಲುಪಿದೆ</p></div>

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟ ಶುಕ್ರವಾರ 100 ಅಡಿ ತಲುಪಿದೆ

   

  – ಪ್ರಜಾವಾಣಿ ಚಿತ್ರ/ಅನೂಪ್ ರಾಘ ಟಿ.

ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯವು ಕಳೆದ 80 ವರ್ಷಗಳಲ್ಲಿ (1946–2025) ಮೇ ತಿಂಗಳಲ್ಲೇ 4ನೇ ಬಾರಿಗೆ 100 ಅಡಿ ತಲುಪಿದೆ. 

ADVERTISEMENT

ಸಾಮಾನ್ಯವಾಗಿ ಜೂನ್‌ ಅಂತ್ಯದಿಂದ ಜುಲೈ ಅಂತ್ಯದ ನಡುವಿನ ಅವಧಿಯಲ್ಲಿ ಕೆಆರ್‌ಎಸ್‌ ಡ್ಯಾಂ ನೀರಿನ ಮಟ್ಟ 100 ಅಡಿಗೆ ಏರಿಕೆಯಾಗುತ್ತಿತ್ತು. ಈ ಬಾರಿ ಮೇ 30ರಂದೇ ದಾಖಲೆ ಮಟ್ಟದ ನೀರು ಸಂಗ್ರಹವಾಗಿದೆ. ಮೊದಲ ಬಾರಿಗೆ 1954ರಲ್ಲಿ ಮೇ 22ರಂದು, 1961ರಲ್ಲಿ ಮೇ 28ರಂದು, 2022ರಲ್ಲಿ ಮೇ 11ರಂದು ನೀರಿನ ಮಟ್ಟ ನೂರು ಅಡಿ ಮುಟ್ಟಿತ್ತು. 

ನಿರಂತರ ಮಳೆ:

ಕೊಡಗು ಜಿಲ್ಲೆಯ ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೆ.ಆರ್‌.ಎಸ್‌. ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಗುರುವಾರ 22,788 ಕ್ಯೂಸೆಕ್‌ ಮತ್ತು ಶುಕ್ರವಾರ 19,448 ಕ್ಯೂಸೆಕ್‌ ಒಳಹರಿವು ಇದ್ದು, ಹೊರಹರಿವಿನ ಪ್ರಮಾಣ 670 ಕ್ಯೂಸೆಕ್‌ ಇದೆ. 

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, 49.452 ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. ಶುಕ್ರವಾರ ಜಲಾಶಯದಲ್ಲಿ 22.888 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಭರ್ತಿಯಾಗಲು ಇನ್ನೂ 27 ಟಿಎಂಸಿ ಅಡಿ ನೀರು ಹರಿದು ಬರಬೇಕಿದೆ. 8 ಟಿ.ಎಂ.ಸಿ ಅಡಿ ನೀರನ್ನು ‘ಡೆಡ್‌ ಸ್ಟೋರೇಜ್‌’ ಎಂದು ಪರಿಗಣಿಸಲಾಗುತ್ತದೆ. ಉಳಿದ ನೀರನ್ನು ಮಾತ್ರ ಕುಡಿಯಲು ಮತ್ತು ಕೃಷಿ ಚಟುವಟಿಕೆಗೆ ಬಳಸಬಹುದು.

ಒಂದೇ ದಿನ 4 ಅಡಿ ನೀರು: 

ಕಾವೇರಿ ಕೊಳ್ಳದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಜಲಾಶಯಕ್ಕೆ ಮಂಗಳವಾರ ಒಂದೇ ದಿನದಲ್ಲಿ 4 ಅಡಿಗಳಷ್ಟು ನೀರು ಹರಿದು ಬಂದಿತ್ತು. ಕಳೆದ 4 ದಿನಗಳಿಂದ ನಿತ್ಯ ಸರಾಸರಿ 20 ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.  

‘ಕನ್ನಂಬಾಡಿ ಕಟ್ಟೆ ತುಂಬಿದರೆ ಸಹಜವಾಗಿಯೇ ಅನ್ನದಾತರಿಗೆ ಸಂತಸವಾಗುತ್ತದೆ. ಈ ಬಾರಿ ನಾಲೆ ಅಭಿವೃದ್ಧಿ ನಡೆಯುತ್ತಿರುವುದರಿಂದ ನೀರು ಸರಾಗವಾಗಿ ಹರಿದು ಕಾವೇರಿ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಸಿಗುತ್ತದೆ ಎಂಬ ಆಶಾಭಾವ ಮೂಡಿದೆ. ಕಬ್ಬು, ಭತ್ತ, ರಾಗಿ ಬೆಳೆಯಲು ಅನುಕೂಲವಾಗುತ್ತದೆ’ ಎಂದು ಮಳವಳ್ಳಿಯ ರೈತ ಕೆ.ಎಸ್‌. ದ್ಯಾಪೇಗೌಡ ಸಂತಸ ಹಂಚಿಕೊಂಡರು. 

ಕೆಆರ್‌ಎಸ್‌ ಅಣೆಕಟ್ಟೆಯ 90 ವರ್ಷಗಳ ಇತಿಹಾಸದಲ್ಲಿ 2024ರಲ್ಲಿ ಮೊದಲ ಬಾರಿಗೆ 154 ದಿನ ಅಣೆಕಟ್ಟೆ ಭರ್ತಿಯಾಗಿತ್ತು. ಈ ವರ್ಷ ಮೇ ತಿಂಗಳಲ್ಲೇ 100 ಅಡಿ ನೀರು ಬಂದಿರುವುದು ಸಂತಸ ತಂದಿದೆ
– ಜಯಂತ್‌ ವಿ. ಕಾರ್ಯಪಾಲಕ ಎಂಜಿನಿಯರ್‌ ಕಾವೇರಿ ನೀರಾವರಿ ನಿಗಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.