ADVERTISEMENT

81 ಅಡಿಗೆ ಇಳಿದ ಕೆಆರ್‌ಎಸ್ ನೀರು‌: ಐತಿಹಾಸಿಕ ದೇಗುಲ ಗೋಚರ

​ಪ್ರಜಾವಾಣಿ ವಾರ್ತೆ
Published 27 ಮೇ 2023, 0:29 IST
Last Updated 27 ಮೇ 2023, 0:29 IST
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ 81.3 ಅಡಿಗೆ ಕುಸಿದಿದ್ದು, ಜಲಾಶಯದಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿರುವುದು
ಕೆಆರ್‌ಎಸ್‌ ಜಲಾಶಯದಲ್ಲಿ ನೀರಿನ ಮಟ್ಟ 81.3 ಅಡಿಗೆ ಕುಸಿದಿದ್ದು, ಜಲಾಶಯದಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿರುವುದು   

ಶ್ರೀರಂಗಪಟ್ಟಣ (ಮಂಡ್ಯ): ತಾಲ್ಲೂಕಿನ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 81.03 ಅಡಿಗೆ ಕುಸಿದಿದ್ದು, ಹಿನ್ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯ ಗೋಚರಿಸುತ್ತಿದೆ.

ಜಲಾಶಯ ನಿರ್ಮಾಣದ ವೇಳೆ ಸ್ಥಳಾಂತರಿಸದೆ ಹಾಗೇ ಬಿಟ್ಟಿದ್ದ ಶಿಲಾ ದೇಗುಲ ಸಂಪೂರ್ಣ ಗೋಚರಿಸುತ್ತಿದೆ. 2019ರ ನಂತರ ದೇವಾಲಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಕಾಣುತ್ತಿದೆ. ಮೈಸೂರು ತಾಲ್ಲೂಕಿನ ಆನಂದೂರು ಮತ್ತು ಮಲ್ಲೇಗೌಡನಕೊಪ್ಪಲು ವ್ಯಾಪ್ತಿಯಲ್ಲಿರುವ ದೇವಾಲಯವನ್ನು ಜನ ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ದೇವಾಲಯದ ಬಳಿ ಸೆಲ್ಫಿ ತೆಗೆದುಕೊಳ್ಳುವುದು, ಸುತ್ತಲೂ ವಿಹರಿಸುವುದು ಸಾಮಾನ್ಯವಾಗಿದೆ.

ಜಲಾಶಯಕ್ಕೆ ಶುಕ್ರವಾರ 448 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು, ನದಿ ಮತ್ತು ನಾಲೆಗಳಿಗೆ 3,009 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. 49 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 11.37 ಟಿಎಂಸಿ ಅಡಿಗಳಷ್ಟು ನೀರಿದೆ.

ADVERTISEMENT

ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 104.8 ಅಡಿ ನೀರಿತ್ತು. 2,900 ಕ್ಯುಸೆಕ್‌ ಒಳ ಹರಿವು, 2,387 ಕ್ಯುಸೆಕ್‌ ಹೊರ ಹರಿವು ದಾಖಲಾಗಿತ್ತು. 26.81 ಟಿಎಂಸಿ ಅಡಿಗಳಷ್ಟು ನೀರಿ ಸಂಗ್ರಹ ಇತ್ತು. ಜಲಾಶಯದ ನೀರಿನ ಮಟ್ಟ 72 ಅಡಿಗೆ ಕುಸಿದರೆ ಹಿನ್ನೀರಿನಲ್ಲಿ ಮುಳುಗಿರುವ ಕಣ್ಣೇಶ್ವರ ದೇವಾಲಯ ಗೋಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.