ಕಿಕ್ಕೇರಿ: ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬದುಕಿ ಬಡತನದಲ್ಲಿ ಇಹಲೋಕ ತ್ಯಜಿಸಿದ ಕವಿ ಕೆ.ಎಸ್. ನರಸಿಂಹಸ್ವಾಮಿ ಕಿಕ್ಕೇರಿಯ ಹೆಸರನ್ನು ವಿಶ್ವಕ್ಕೆ ತೋರಿಸಿಕೊಟ್ಟವರು ಎಂದು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಹೇಳಿದರು.
ಸರ್ಕಾರಿ ಸ್ವಾಮ್ಯದ ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ವತಿಯಿಂದ ಸ್ಪಂದನಾ ಫೌಂಡೇಷನ್, ಶ್ರೀ ಬಾಲಾಜಿ ವಿದ್ಯಾ ಸೇವಾ ಸಂಸ್ಥೆ, ಕನ್ನಡ ಕಲಾಸಂಘ, ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಈಚೆಗೆ ಏರ್ಪಡಿಸಿದ್ದ ‘ಒಲವಿನ ಕವಿ ಕೆ.ಎಸ್.ನ ಪತ್ನಿ ವೆಂಕಮ್ಮ ಒಂದು ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಡೀ ವಿಶ್ವದಲ್ಲಿಯೇ ಕವಿಪತ್ನಿಯ ಹೆಸರಿನಲ್ಲಿ ಬದುಕಿರುವ ಕವಿಪತ್ನಿಗೆ ಪ್ರಶಸ್ತಿ ನೀಡುವ ಕೆಲಸವಾಗಿಲ್ಲ. ಇಂತಹ ಕೆಲಸ ಸರ್ಕಾರಿ ಸ್ವಾಮ್ಯದ ಕೆಎಸ್‌ನ ಟ್ರಸ್ಟ್ ಮಾಡುತ್ತಿದೆ. ಪ್ರತಿ ವ್ಯಕ್ತಿಗಳ ಕೀರ್ತಿ ಹಿಂದೆ ಪತ್ನಿಯ ಪರಿಶ್ರಮವಿದೆ. ಮೈಸೂರು ಮಲ್ಲಿಗೆಯ ಕವಿ ಕೆಎಸ್‌ನ ಕೀರ್ತಿ ಹಿಂದೆ ಪತ್ನಿ ಶ್ರಮವಿದೆ. ಪತ್ನಿಗೆ ಗೌರವ ನೀಡಿದರೆ ಮತ್ತಷ್ಟು ಉತ್ತಮ ಕೆಲಸ ಇಡೀ ಸಮುದಾಯಕ್ಕೆ ಲಭಿಸಲಿದೆ ಎಂದರು.
ಟ್ರಸ್ಟ್‌ನಿಂದ ಈಗಾಗಲೇ ಜ್ಞಾನಪೀಠ ಪ್ರಶಸ್ತಿಯ ಚಂದ್ರಶೇಖರ ಕಂಬಾರ ಪತ್ನಿ ಸತ್ಯಭಾಮಾ, ದಲಿತ ಕವಿ ಸಿದ್ದಲಿಂಗಯ್ಯ ಪತ್ನಿ ರಮಾಕುಮಾರಿ, ಕವಿ ಬಿ.ಆರ್. ಲಕ್ಷ್ಮಣರಾವ್ ಅವರ ಪತ್ನಿ ಗಿರಿಜಾ, ಪ್ರೊ. ಎಸ್.ಜಿ. ಸಿದ್ದರಾಮಯ್ಯ ಪತ್ನಿ ಪ್ರೇಮಲೀಲಾ, ಕವಿ ಸತ್ಯಾನಂದ ಪಾತ್ರೋಟ ಪತ್ನಿ ಸಮತಾಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ರಾಜ್ಯದ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ನುಡಿದರು.
ಸ್ಪಂದನಾ ಟ್ರಸ್ಟ್ ಅಧ್ಯಕ್ಷ ತ್ರಿವೇಣಿ ಮಾತನಾಡಿದರು. ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಗೀತಗಾಯನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಮಕ್ಕಳು ಗಾಯಕರೊಂದಿಗೆ ಕೆಎಸ್‌ನ ಅವರ ಬಳೆಗಾರ ಚನ್ನಯ್ಯ, ರಾಯರು ಬಂದರು ಮಾವನ ಮನೆಗೆ, ನಗುವಾಗ ನಕ್ಕು ಅಳುವಾಗ ಅತ್ತು, ಚಳಿಗಾಲ ಬಂದಾಗ ಛಳಿ ಛಳಿ ಎಂದರು ಮತ್ತಿತರ ಗೀತೆಗಳನ್ನು ಹಾಡಿ ಖುಷಿಪಟ್ಟರು.
ಸ್ಪಂದನಾ ಟ್ರಸ್ಟಿ ತ್ರಿವೇಣಿ, ಸಮಾಜ ಸೇವಾಕರ್ತ ಮಹೇಂದ್ರ, ಮಂಜುಳಾ, ಕವಿತಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.