ADVERTISEMENT

ಉದ್ಯೋಗ ಮೇಳ: 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ

ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ಉದ್ಯೋಗ ಮೇಳ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 7:03 IST
Last Updated 24 ಡಿಸೆಂಬರ್ 2025, 7:03 IST
ಪಾಂಡವಪುರ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ರೈತ ಸಂಘದ ಮುಖಂಡರು ದಿ.ಕೆ.ಎಸ್.ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಾಯಿತು.
ಪಾಂಡವಪುರ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ರೈತ ಸಂಘದ ಮುಖಂಡರು ದಿ.ಕೆ.ಎಸ್.ಪುಟ್ಟಣ್ಣಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಯೋಗ ಮೇಳಕ್ಕೆ ಚಾಲನೆ ನೀಡಲಾಯಿತು.   

ಪಾಂಡವಪುರ: ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ನೆನಪಿನಲ್ಲಿ ಉದ್ಯೋಗ ಮೇಳ ಆಯೋಜಿಸಿರುವುದು ಈ ಭಾಗದ ನಿರುದ್ಯೋಗಿ ಯುವಕ–ಯುವತಿಯರಿಗೆ ಆಶಾಕಿರಣವಾಗಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ರೈತ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನದ ನೆನಪಿನಲ್ಲಿ ಪುಟ್ಟಣ್ಣಯ್ಯ ಫೌಂಡೇಷನ್, ರೈತ ಸಂಘ, ಉದ್ಯೋಗದಾತ ಫೌಂಡೇಷನ್ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಅವರು ಮಾತನಾಡಿದರು.

‘ಉದ್ಯೋಗ ಹರಸಿ ವಲಸಿ ಹೋಗುತ್ತಿದ್ದ ಯುವಕ–ಯುವತಿಯರ ಪರವಾಗಿ ಹೋರಾಟ ನಡೆಸಿದ್ದ ಪುಟ್ಟಣ್ಣಯ್ಯನವರು ಸರ್ಕಾರದ ಗಮನ ಸೆಳೆದಿದ್ದರು. ಮಂಡ್ಯ ನೀರಾವರಿ ಜಿಲ್ಲೆಯಾಗಿರುವುದರಿಂದ ಕೃಷಿಯಿಂದ ಶೇ 60ರಷ್ಟು ಉದ್ಯೋಗ ಸೃಷ್ಟಿಕೊಳ್ಳಬಹುದಾಗಿದ್ದು, ಯುವಕರು ಈ ನಿಟ್ಟಿನಲ್ಲಿ ಚಿಂತಿಸಬೇಕಿದೆ’ ಎಂದರು.

ADVERTISEMENT

ಸರ್ವೋದಯ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್ ಮಾತನಾಡಿ, ‘ಯುವಕ–ಯುವತಿಯರಿಗೆ ಉದ್ಯೋಗ ಕಲ್ಪಿಸಿಕೊಡುವುದು ಪುಟ್ಟಣ್ಣಯ್ಯನವರ ಕನಸಾಗಿತ್ತು. ಅದನ್ನು ಅವರ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸಾಕಾರಗೊಳಿಸುತ್ತಿದ್ದಾರೆ’ ಎಂದರು.

ರೈತ ಸಂಘದ ವರಿಷ್ಠೆ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ‘ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಬಳಿ ಈ ಭಾಗದ ಯುವಕ–ಯುವತಿಯರು ಉದ್ಯೋಗಕ್ಕಾಗಿ ಬರುತ್ತಿದ್ದರು. ಇದನ್ನು ಮನಗಂಡ ಶಾಸಕ ದರ್ಶನ್ ಉದ್ಯೋಗ ಮೇಳವನ್ನು ಆಯೋಜಿಸಿದ್ದಾರೆ’ ಎಂದರು.

‘ಉದ್ಯೋಗ ಮೇಳದಲ್ಲಿ ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 58 ಕಂಪನಿಗಳು ಭಾಗವಹಿಸಿದ್ದವು.
2 ಸಾವಿರ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು. ಮೊದಲ ಹಂತದಲ್ಲಿ 22 ಮಂದಿ ಅಂಗವಿಕಲರು ಸೇರಿದಂತೆ 400 ಮಂದಿಗೆ ಸ್ಥಳದಲ್ಲೇ ನೇಮಕಾತಿ ಆದೇಶ ಪ್ರತಿ ನೀಡಲಾಯಿತು. ಎರಡನೇ ಹಂತದಲ್ಲಿ ಉಳಿದವರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಗುವುದು’ ಎಂದು ಪುಟ್ಟಣ್ಣಯ್ಯ ಫೌಂಡೇಷನ್‌ ಕಾರ್ಯನಿರ್ವಾಹಕ ನಿರ್ದೇಶಕ ರಣಜಿತ್ ತಿಳಿಸಿದರು.

ಬಿಇ ಓದಿ ಮನೆಯಲ್ಲಿದ್ದೆ. ಈ ಉದ್ಯೋಗ ಮೇಳದಲ್ಲಿ ನನಗೆ ಟಾಟಾ ಕಂಪನಿಯಲ್ಲಿ ಕೆಲಸ ದೊರೆತದ್ದು ನಮ್ಮ ಕುಟುಂಬಕ್ಕೆ ಆಧಾರವಾಗಲಿದೆ.
ಅನೂಷ ಚಂದ್ರೆ, ಉದ್ಯೋಗಾಕಾಂಕ್ಷಿ

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಹರವು ಪ್ರಕಾಶ್, ಎಸ್.ದಯಾನಂದ್, ಎಚ್.ಎಲ್.ಮುರುಳೀಧರ್ ಪುಟ್ಟಣ್ಣಯ್ಯ ಫೌಂಡೇಷನ್‌ ಸ್ಮಿತಾ ಪುಟ್ಟಣ್ಣಯ್ಯ, ರಾಘವ ಪ್ರಕಾಶ್, ಉದ್ಯೋಗದಾ ಫೌಂಡೇಷನ್ ನ ಡಿ.ಬಿ.ರುಕ್ಮಾಂಗದ, ಶ್ರೀಮೂರ್ತಿ ಗಿರಿಯಾರಹಳ್ಳಿ ಇದ್ದರು. 

ಪಾಂಡವಪುರ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಏರ್ಪಡಿಸಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.