
ಮಂಡ್ಯ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯ ಗಳಿಕೆಯಲ್ಲಿ ‘ಅತ್ಯಂತ ಶ್ರೀಮಂತ’ ಎನಿಸಿದೆ. 2022–23ರಲ್ಲಿ ₹123 ಕೋಟಿ, 2023–24ರಲ್ಲಿ ₹146 ಕೋಟಿ, 2024–25ರಲ್ಲಿ ₹155 ಕೋಟಿ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದೆ.
ಕೊಲ್ಲೂರು ಮೂಕಾಂಬಿಕಾ ದೇವಾಲಯ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಾಲಯ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿವೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಒಟ್ಟು 34,566 ದೇವಾಲಯಗಳಿದ್ದು, ಇವುಗಳಲ್ಲಿ 205 ದೇವಾಲಯಗಳು ‘ಎ’ ವರ್ಗ, 193 ದೇವಾಲಯಗಳು ‘ಬಿ’ ವರ್ಗ ಹಾಗೂ 34,168 ದೇವಾಲಯಗಳು ‘ಸಿ’ ವರ್ಗದಲ್ಲಿವೆ.
ಆದಾಯ ಹೆಚ್ಚಳ
ಮೂರು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ದೇವಾಲಯಗಳ ವರಮಾನ ಹೆಚ್ಚಳವಾಗುತ್ತಿದೆ. ರಾಜ್ಯದ ಪ್ರಮುಖ 10 ದೇವಸ್ಥಾನಗಳಿಂದ 2022–23ರಲ್ಲಿ ₹368 ಕೋಟಿ, 2023–24ರಲ್ಲಿ ₹418 ಕೋಟಿ ಹಾಗೂ 2024–25ರಲ್ಲಿ ₹433 ಕೋಟಿ ಆದಾಯ ಗಳಿಕೆಯಾಗಿದೆ.
‘ಕಳೆದ ಮೂರು ವರ್ಷಗಳಲ್ಲಿ ‘ಎ’ ವರ್ಗದ ದೇವಾಲಯಗಳಿಂದ ₹2,216 ಕೋಟಿ ಮತ್ತು ‘ಬಿ’ ವರ್ಗದ ದೇವಾಲಯಗಳಿಂದ ₹103 ಕೋಟಿ ಆದಾಯ ಬಂದಿದೆ. 25,171 ಪ್ರವರ್ಗ ‘ಸಿ’ ದೇವಾಲಯಗಳಿಗೆ ವಾರ್ಷಿಕ ₹72 ಸಾವಿರಗಳ ತಸ್ತೀಕ್ ಮೊತ್ತವನ್ನು ಹಾಗೂ ತಸ್ತೀಕ್ ಪಡೆಯದಿರುವ ಒಟ್ಟು 3,721 ದೇವಾಲಯಗಳಿಗೆ ವಾರ್ಷಿಕ ₹72 ಸಾವಿರ ವರ್ಷಾಸನವನ್ನು ನೀಡಲಾಗುತ್ತಿದ್ದು, ಇದು ಆ ದೇವಾಲಯಗಳ ವಾರ್ಷಿಕ ಆದಾಯವಾಗಿದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮೂಲಸೌಕರ್ಯಕ್ಕೆ ಒತ್ತು
‘ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ವಸತಿ ಸೌಲಭ್ಯ, ಅನ್ನದಾಸೋಹ (ಪ್ರಸಾದ), ನಾಮಫಲಕ ಅಳವಡಿಕೆ, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ, ವಿಶ್ರಮಿಸಲು ನೆರಳು ಮತ್ತು ಆಸನ, ಭದ್ರತಾ ದೃಷ್ಟಿಯಿಂದ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮೊದಲಾದ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಮೂರು ವರ್ಷಗಳಲ್ಲಿ ಅನ್ನದಾಸೋಹ ಮತ್ತು ಮೂಲಸೌಕರ್ಯಕ್ಕಾಗಿ ‘ಎ’ ವರ್ಗದ ದೇವಾಲಯಗಳಿಗೆ ₹1,647 ಕೋಟಿ ಮತ್ತು ‘ಬಿ’ ವರ್ಗದ ದೇವಾಲಯಗಳಿಗೆ ₹76 ಕೋಟಿ ವೆಚ್ಚ ಭರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಆದಾಯದಿಂದ ದೇವಾಲಯಗಳ ಸಮಗ್ರ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಕರ್ಯ ಕಲ್ಪಿಸಲಾಗಿದೆ. ಅಗತ್ಯವಿದ್ದಲ್ಲಿ ಹೆಚ್ಚುವರಿ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ
-ರಾಮಲಿಂಗಾರೆಡ್ಡಿ ಮುಜರಾಯಿ ಸಚಿವ
----
2024–25ನೇ ಸಾಲಿನ ರಾಜ್ಯದ 10 ಶ್ರೀಮಂತ ದೇವಾಲಯಗಳು ದೇವಾಲಯಗಳು;ವಾರ್ಷಿಕ ಆದಾಯ (₹ಕೋಟಿಗಳಲ್ಲಿ)
ಕುಕ್ಕೆ ಸುಬ್ರಹ್ಮಣ್ಯ;155 ಕೊಲ್ಲೂರು ಮೂಕಾಂಬಿಕಾ;71 ಮೈಸೂರಿನ ಚಾಮುಂಡೇಶ್ವರಿ;50 ನಂಜನಗೂಡಿನ ಶ್ರೀಕಂಠೇಶ್ವರ;36 ಸವದತ್ತಿಯ ರೇಣುಕಾ ಯಲ್ಲಮ್ಮ;30 ಎಡೆಯೂರು ಸಿದ್ಧಲಿಂಗೇಶ್ವರ;29 ಕೊಪ್ಪಳದ ಹುಲಿಗೆಮ್ಮ;17 ಬ್ರಹ್ಮಾವರದ ಮಂದಾರ್ತಿಯ ದುರ್ಗಾಪರಮೇಶ್ವರಿ;16 ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ;13 ಬೆಂಗಳೂರಿನ ಬನಶಂಕರಿ;11
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.