
ಮಂಡ್ಯ: ‘ಕುವೆಂಪು ರಚಿಸಿದ ನಾಡಗೀತೆಗೆ 100 ವರ್ಷ ತುಂಬಿದೆ. ನಾಡು ಕಂಡ ಮಹಾನ್ ದಾರ್ಶನಿಕರಲ್ಲಿ ಕುವೆಂಪು ಒಬ್ಬರು’ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ತು ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ನಾಗರಾಜು ವಿ.ಭೈರಿ ಹೇಳಿದರು.
ಮಂಡ್ಯ ವಿಶ್ವವಿದ್ಯಾನಿಲಯದ ಶಾರದಾ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಬೆಂಗಳೂರು, ಮಂಡ್ಯ ವಿವಿ, ಕೃಷಿಕ್ ಅಲಯನ್ಸ್ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಈಚೆಗೆ ಆಯೋಜಿಸಿದ್ದ ಕುವೆಂಪು ವಿರಚಿತ ನಾಡಗೀತೆ ರಚನೆಗೆ 100 ವರ್ಷ ಸಂಭ್ರಮಾಚರಣೆ ಪ್ರಯುಕ್ತ ‘ಭಾವಾಭಿಯಾನ ಸುಗಮ ಸಂಗೀತ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
ಭಾರತದೇಶಕ್ಕೆ ಸ್ವಾತಂತ್ರ್ಯ ಸಿಗದ ದಿನಗಳಲ್ಲಿಯೇ (1924ರಲ್ಲಿ) ಕರ್ನಾಟಕದ ಸ್ವರೂಪವನ್ನು ಹಾಡಿನಲ್ಲಿ ಕುವೆಂಪು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಆಗ ಕುವೆಂಪು ಅವರಿಗೆ ವಯಸ್ಸು 20 ವರ್ಷ, ಇನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದರು ಎಂದು ನುಡಿದರು.
ಮೈಸೂರು ರಾಜರ ಆಡಳಿತದಲ್ಲಿ 9 ಜಿಲ್ಲೆಗಳು ಮಾತ್ರ ಇದ್ದವು. ಹೈದರಾಬಾದ್ ಕರ್ನಾಟಕ ಇರಲಿಲ್ಲ. ಬ್ರಿಟಿಷರ ಆಡಳಿತವಿತ್ತು. ಏಕೀಕರಣದ ಕನಸು ಕುವೆಂಪು ಅವರಿತ್ತು ಅನ್ನಿಸುತ್ತದೆ, ಅವಕ್ಕೆ ಅವರನ್ನು ಒಬ್ಬ ಮಹಾನ್ ದಾರ್ಶನಿಕರು ಎಂದರೂ ತಪ್ಪಾಗದು ಎಂದರು.
ವಿದ್ಯಾರ್ಥಿಗಳು ಸುಗಮ ಸಂಗೀತ ಕೇಳುವುದರಿಂದ ನೆನಪಿನ ಶಕ್ತಿ ಹೆಚ್ಚಾಗುತ್ತದೆ. ಓದಿನ ಆಸಕ್ತಿ ವೃದ್ಧಿಸುತ್ತದೆ. ಸುಗಮ ಸಂಗೀತ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದು ಸಾಬೀತಾಗಿದೆ ಎಂದು ನುಡಿದರು.
ಕುವೆಂಪು ವಿರಚಿತ ಭಾವಗೀತೆ, ನಾಡಗೀತೆ, ಕವಿತೆ-ಕವನಗಳನ್ನು ಪ್ರತಿಭಾಂಜಲಿ ಡೇವಿಡ್ ನೇತೃತ್ವದಲ್ಲಿ ಗಾಯಕರು ಹಾಡಿ ರಂಜಿಸಿದರು. ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ ಅಧ್ಯಕ್ಷ ಕಾ.ವೆಂ. ಶ್ರೀನಿವಾಸಮೂರ್ತಿ, ಅಲಯನ್ಸ್ ಸಂಸ್ಥೆ ಸೌತ್ ಮಲ್ಟಿಪಲ್ ಅಧ್ಯಕ್ಷ ಕೆ.ಟಿ. ಹನುಮಂತು, ಮಂಡ್ಯ ವಿವಿ ಕುಲಸಚಿವ ಎಂ.ಪಿ. ಕೃಷ್ಣಕುಮಾರ್, ಸಾಂಸ್ಕೃತಿಕ ಸಂಯೋಜಕ ಶಿವರಾಮು, ಅಧ್ಯಾಪಕರು ಹಾಜರಿದ್ದರು.
ಕುವೆಂಪುರವರ ನಾಡಗೀತೆಯನ್ನು ಸಹಸ್ರ ಕಂಠದಲ್ಲಿ ವಿದ್ಯಾರ್ಥಿಗಳು ಮತ್ತು ಗಾಯಕರು ಹಾಡಿದರು. ಗಾಯನದಲ್ಲಿ ಆನಂದ ಮಾದಲ್ಗೆರೆ ‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ’ ಗೀತೆಯನ್ನು ಹಾಡಿದರು. ಡೇವಿಡ್ ಪ್ರತಿಭಾಂಜಲಿರವರು ‘ಕಾಣದ ಕಡಲಿಗೆ’, ‘ಕೋಡಗನ ಕೋಳಿ ನುಂಗಿತ್ತಾ’, ‘ಎಲೆಗಳು ನೂರಾರು ಭಾವದ ಎಳೆಗಳು ನೂರಾರು’, ಎರ್ರಿಸ್ವಾಮಿ ಅವರು ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’, ಗಾನಶ್ರೀರವರು ‘ಮುಗಿಲ ಮಾರಿಗೆ ರಾಗ ರತಿಯ’, ದಿಶಾ ಜೈನ್ ಅವರು ‘ಒಂದಿರುಳು ಕನಸಿನಲ್ಲಿ ನನ್ನವಳ ಕೇಳಿದೆನು’ ಮುಂತಾದ ಭಾವಗೀತೆಗಳನ್ನು ಹಾಡಿ ಪ್ರೇಕ್ಷಕರ ಮನತಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.