
ಮಂಡ್ಯ: ‘ಕೇಂದ್ರ ಸರ್ಕಾರದ ನಡೆ ಬಿಸಿಯೂಟ ಯೋಜನೆಯ ನೌಕರರ ವಿರುದ್ಧವಾಗಿದೆ. ಕಷ್ಟಪಟ್ಟು ದುಡಿಯುವ ಬಿಸಿಯೂಟ ವರ್ಗಕ್ಕೆ ವೇತನ ಹೆಚ್ಚಿಸಬೇಕು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ’ ಎಂದು ಒತ್ತಾಯಿಸಿ ಸಿಐಟಿಯು ಹಾಗೂ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಜಮಾವಣೆಗೊಂಡ ಮೈಸೂರು, ಹಾಸನ, ಚಾಮರಾಜನಗರ ಹಾಗೂ ಮಂಡ್ಯದ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಕಾರ್ಯಕರ್ತರು ಹೆದ್ದಾರಿ ಮೂಲಕ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಕೇಂದ್ರ ಸಚಿವರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಕೇಂದ್ರ ಸರ್ಕಾರ ಮತ್ತು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ಸ್ಕೀಮ್ ನೌಕರರಿಗೆ ದ್ರೋಹ’:
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಮಾತನಾಡಿ, ‘ಅಂಗನವಾಡಿ, ಬಿಸಿಯೂಟ, ಆಶಾ ಮಹಿಳೆಯರ ಉದ್ಯೋಗವನ್ನು ಕಾಯಂ ಮಾಡಬೇಕು. ಹೆರಿಗೆ ರಜೆ, ಮುಟ್ಟಿನ ರಜೆ, ಸಾರ್ವತ್ರಿಕ ರಜೆಗಳನ್ನು ಖಾತ್ರಿಪಡಿಸಬೇಕು. ಸ್ಕೀಮ್ ನೌಕರರಿಗೆ ದ್ರೋಹ ಬಗೆದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಲಿ, ಸ್ಕೀಮ್ ನೌಕರರಿಗೆ ಶಾಸನಬದ್ಧ ಸವಲತ್ತುಗಳನ್ನು ನೀಡದ ಶ್ರಮಶಕ್ತಿ ನೀತಿ ಬೇಡವೇ ಬೇಡ’ ಎಂದು ಆಗ್ರಹಿಸಿದರು.
ಆಹಾರ, ಆರೋಗ್ಯ ಮತ್ತು ಶಿಕ್ಷಣದ ಉದ್ದೇಶಗಳನ್ನಿಟ್ಟಕೊಂಡು ಅಂಗನವಾಡಿ ಕೇಂದ್ರಗಳು, ಬಿಸಿಯೂಟ ಮತ್ತು ಆಶಾ ಯೋಜನೆ ಪ್ರಾರಂಭಗೊಂಡು ಹಲವು ದಶಕಗಳಾಗಿವೆ. ಆದರೆ ಇದುವರೆಗೂ ಈ ಯೋಜನೆಗಳನ್ನು ಕಾಯಂ ಮಾಡದೇ ಸುಮಾರು 56 ಲಕ್ಷ ಮಹಿಳೆಯರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಇದ್ದಾರೆ ಎಂದು ಕಿಡಿಕಾರಿದರು.
ಕನಿಷ್ಠ ವೇತನ ನೀಡಿ:
ಮುಂಬರುವ ಬಜೆಟ್‌ನಲ್ಲಿಯಾದರೂ ಕನಿಷ್ಠ ವೇತನ ನೀಡಬೇಕು. ಈಗಾಗಲೇ ಮಾಡುತ್ತಿರುವ 6 ಗಂಟೆಗೆ ಕೆಲಸದ ಅವಧಿಯ ಹೆಚ್ಚಳದ ಆದೇಶ ಹೊರಡಿಸಬೇಕು. ಯಾವುದೇ ಸ್ವರೂಪದಲ್ಲಿಯೂ ಬಿಸಿಯೂಟವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಬಾರದು. ಐಎಲ್‌ಸಿ ಶಿಫಾರಸಿನಂತೆ ಉದ್ಯೋಗಸ್ಥರೆಂದು ಪರಿಗಣಿಸಿ ಶಾಸನಬದ್ಧ ಸವಲತ್ತು ಕೊಡಬೇಕು ಎಂದು ಆಗ್ರಹಿಸಿದರು.
ಕೆಪಿಎಸ್ ಶಾಲೆಗಳ ಪರಿಕಲ್ಪನೆಯಿಂದ ಶಾಲೆಗಳು ವಿಲೀನವಾದಾಗ ಬಿಸಿಯೂಟ ನೌಕರರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ಅವರ ಕೆಲಸದ ಭದ್ರತೆಯನ್ನು ಖಚಿತಪಡಿಸಬೇಕು. ಬಿಸಿಯೂಟ ನೌಕರರಿಗೆ ಆರೋಗ್ಯ ವಿಮೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಸ್.ವರಲಕ್ಷ್ಮಿ, ಲಕ್ಷೀದೇವಿ, ಸಿ.ಕುಮಾರಿ, ಮಹದೇವಮ್ಮ, ಸೌಮ್ಯಾ ಕುಣಿಗನಹಳ್ಳಿ, ಮಾಲಿನಿ ಮೆಸ್ತಾ, ಅರವಿಂದ್, ಶಶಿಕಲಾ, ಕುಸುಮಾ, ಮಂಜುಳಾ, ಶಿವಮ್ಮ ಭಾಗವಹಿಸಿದ್ದರು.
56 ಲಕ್ಷ ಮಹಿಳೆಯರ ಕೆಲಸ ಕಾಯಂಗೊಳಿಸಲು ಆಗ್ರಹ ಕೇಂದ್ರ ಸಚಿವರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಬಿಸಿಯೂಟ ನೌಕರರು
ಕೇಂದ್ರದ ವಂತಿಗೆ ಇಳಿಕೆ: ಆರೋಪ
‘ಈ ಯೋಜನೆಗಳಿಗೆ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತನ್ನ ಪಾಲಿನ ವಂತಿಗೆಯನ್ನು ಶೇ 90ರಿಂದ ಶೇ 60ಕ್ಕೆ ಇಳಿಸಿದೆ. ಬೆಲೆ ಏರಿಕೆ ಆಧಾರದಲ್ಲಿ ಬಜೆಟ್ ಹೆಚ್ಚಿಸುತ್ತಿಲ್ಲ ಬದಲಿಗೆ ಕಡಿತ ಮಾಡಲಾಗುತ್ತಿದೆ. ಇದರಿಂದಾಗಿ ಅಂಗನವಾಡಿ ಕೇಂದ್ರಗಳ ಬಿಸಿಯೂಟದ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು. ಈ ಹಿನ್ನೆಲೆಯಲ್ಲಿ ಡಿಸೆಂಬರ್ 1ರಿಂದ ಅಂಗನವಾಡಿ ಬಿಸಿಯೂಟ ಆಶಾ ನೌಕರರು ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗಿದ್ದಾರೆ. ಬಿಸಿಯೂಟ ಯೋಜನೆ ಜಾರಿಗೆ ಬಂದ ಮೇಲೆ ಶಾಲೆಗಳಲ್ಲಿ ಗೈರು ಹಾಜರಾತಿ ಶಾಲಾ ಬಿಡುವಿಕೆ ಕಡಿಮೆಯಾಗಿ ಶಾಲಾ ಮಕ್ಕಳು ಮಧ್ಯಾಹ್ನದ ನಂತರದಲ್ಲಿಯೂ ಲವಲವಿಕೆಯಿಂದ ಅಭ್ಯಾಸದಲ್ಲಿ ತೊಡಗಿದ್ದರು. 2011ರಲ್ಲಿ ಬಂದ ಯೋಜನೆಯಿಂದಾಗಿ ಇಂದು 11.8 ಕೋಟಿ ಫಲಾನುಭವಿಗಳನ್ನು ಒಳಗೊಂಡಿರುವುದರಿಂದ ಇವರಿಗೆ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.