ಶ್ರೀರಂಗಪಟ್ಟಣ: ತಾಲ್ಲೂಕಿನ ಆಲದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಸಕ್ತ ಶೈಕ್ಷಣಿಕ ವರ್ಷ (2024–25)ದಿಂದ ಬಂದ್ ಆಗಿದೆ.
ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಶಾಲೆ ಬಿಟ್ಟು ಹೋದದ್ದು ಮತ್ತು ಈ ವರ್ಷ ಯಾವುದೇ ವಿದ್ಯಾರ್ಥಿಗಳು ಶಾಲೆಗೆ ಸೇರದ ಕಾರಣ ಶಾಲೆಯನ್ನು ಮುಚ್ಚಲಾಗಿದೆ. ಮೂರು ವರ್ಷಗಳ ಹಿಂದೆ 25ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆ ಈ ವರ್ಷದಿಂದ ಮುಚ್ಚಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಪಕ್ಕದ ಕೊಡಿಯಾಲ ಮತ್ತು ಕೊತ್ತತ್ತಿಯ ಗ್ರಾಮಗಳಲ್ಲಿರುವ ಖಾಸಗಿ ಶಾಲೆಗಳಿಗೆ ಸೇರಿದ್ದಾರೆ. ಐದಾರು ವರ್ಷಗಳ ಹಿಂದೆ ವಿದ್ಯಾರ್ಥಿಗಳ ಕಲರವ ಕೇಳಿ ಬರುತ್ತಿದ್ದ ಶಾಲೆಯ ಆವರಣ ಬಣಗುಡುತ್ತಿದೆ. ಪಾಠ, ಪ್ರವಚನ ನಡೆಯುತ್ತಿದ್ದ ಕೊಠಡಿಗಳು ಪಾಳು ಬಿದ್ದಿವೆ.
‘ನಮ್ಮೂರಿನ ಶಾಲೆಯಲ್ಲಿ 5 ವರ್ಷಗಳ ಹಿಂದೆ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಶಿವಸ್ವಾಮಿ ಮೇಷ್ಟ್ರು ಪೋಷಕರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು. ಒಂದು ಮಗು ಶಾಲೆಗೆ ಬರದಿದ್ದರೆ ಅಂದೇ ಮನೆಗೆ ಹೋಗಿ ಕರೆತರುತ್ತಿದ್ದರು. ನನ್ನ ಮಗನ ಶಿಕ್ಷಣಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟವರೂ ಅವರೇ. ಶಿವಸ್ವಾಮಿ ಅವರು ಇಲ್ಲಿಂದ ವರ್ಗವಾದ ನಂತರ ಮಕ್ಕಳು ಸೇರುವುದು ನಿಂತು ಹೋಯಿತು. ಇದ್ದ ಮಕ್ಕಳೂ ಶಾಲೆ ಬಿಟ್ಟು ಹೋದರು. ವಿದ್ಯಾರ್ಥಿಗಳು ತಂಡೋಪತಂಡವಾಗಿ ಶಾಲೆ ಬಿಟ್ಟು ಹೋಗುತ್ತಿದ್ದರೂ ಶಿಕ್ಷಕರು ಮತ್ತು ಅಧಿಕಾರಿಗಳು ಶಾಲೆ ಉಳಿಸುವ ಸಣ್ಣ ಪ್ರಯತ್ನವನ್ನೂ ಮಾಡಲಿಲ್ಲ’ ಎಂದು ಗ್ರಾಮದ ಮುಖಂಡ ರವಿ ಬೇಸರ ವ್ಯಕ್ತಪಡಿಸುತ್ತಾರೆ.
‘ಆಲದಹಳ್ಳಿ ಶಾಲೆ ಅರಕೆರೆ– ಮಂಡ್ಯ ರಸ್ತೆಯ ಪಕ್ಕದಲ್ಲೇ ಇದೆ. ಈ ಶಾಲೆಯಲ್ಲಿ ಅಡುಗೆ ಮನೆ, ಕಚೇರಿ ಸೇರಿ ನಾಲ್ಕು ಕೊಠಡಿಗಳಿವೆ. ಈಚೆಗೆ ಬಂದ ಶಿಕ್ಷಕರು ವಿದ್ಯಾರ್ಥಿಗಳು ಮತ್ತು ಪೋಷಕರು ಮನಸ್ಸು ಗೆಲ್ಲಲು ವಿಫಲರಾದ ಕಾರಣ ಪೋಷಕರು ತಮ್ಮ ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗೆ ಸೇರಿಸಿದ್ದಾರೆ. ಶಾಲೆಯನ್ನು ಪುನರಾರಂಭಿಸಬೇಕು. ಸಮರ್ಥ ಶಿಕ್ಷಕರನ್ನು ನೇಮಿಸಬೇಕು’ ಎಂದು ಗ್ರಾಮದ ರತ್ನಮ್ಮ ಒತ್ತಾಯಿಸಿದ್ದಾರೆ.
‘ಗ್ರಾಮದಲ್ಲಿ 900ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಈ ಊರಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಆದರೆ ಮನೆಯ ಮುಂದೆಯೇ ಇರುವ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ, ಸಮವಸ್ತ್ರ ಇತರ ಸೌಲಭ್ಯ ಸಿಗುತ್ತಿದ್ದರೂ ಪೋಷಕರು ತಮ್ಮ ಮಕ್ಕಳನ್ನು ಏಕೆ ಸೇರಿಸುತ್ತಿಲ್ಲ ಎಂಬ ಬಗ್ಗೆ ಯಾರೂ ಚಿಂತಿಸಿಲ್ಲ. ಹಲವು ದಶಕಗಳ ಕಾಲ ಯಶಸ್ವಿಯಾಗಿ ನಡೆಯುತ್ತಿದ್ದ ಶಾಲೆಯನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು’ ಎಂದು ಗ್ರಾಮದ ಹಿರಿಯ ರಂಗ ಕಲಾವಿದೆ ಮಂಜುಳಾ ಆಲದಹಳ್ಳಿ ಮನವಿ ಮಾಡಿದ್ದಾರೆ.
‘ಆಲದಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, 2022–23ನೇ ಸಾಲಿನಲ್ಲಿ ಒಂದರಿಂದ 5ನೇ ತರಗತಿವರೆಗೆ 26 ವಿದ್ಯಾರ್ಥಿಗಳಿದ್ದರು. 2023–24ನೇ ಸಾಲಿಗೆ ಆ ಸಂಖ್ಯೆ 7ಕ್ಕೆ ಕುಸಿಯಿತು. ಪ್ರಸಕ್ತ ವರ್ಷಕ್ಕೆ ಒಬ್ಬ ವಿದ್ಯಾರ್ಥಿ ಮಾತ್ರ ಉಳಿದುಕೊಂಡಿದ್ದ. ಹಾಗಾಗಿ ಶಾಲೆಯನ್ನು ಮುಚ್ಚುವ ಅನಿವಾರ್ಯ ಉಂಟಾಯಿತು. ಶಾಲೆಯಲ್ಲಿದ್ದ ಇಬ್ಬರು ಶಿಕ್ಷಕರನ್ನು ಬೇರೆ ಶಾಲೆಗಳಿಗೆ ನಿಯೋಜಿಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಆರ್.ಪಿ. ತಿಳಿಸಿದ್ದಾರೆ.
ಶಾಲೆಗೆ ಒಬ್ಬ ವಿದ್ಯಾರ್ಥಿ ದಾಖಲು 5 ವರ್ಷಗಳ ಹಿಂದೆ 40 ವಿದ್ಯಾರ್ಥಿಗಳು ಇದ್ದರು ಖಾಸಗಿ ಶಾಲೆಗಳ ವ್ಯಾಮೋಹ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.