ನಾಗಮಂಗಲ: ಹೇಮಾವತಿ ನಾಲೆಯಿಂದ ಕೆರೆಗೆ ನೀರು ತುಂಬಿಸಿದ ಬೆನ್ನಲ್ಲೇ ನೀರಿನ ಒತ್ತಡ ತಡೆಯಲಾರದೆ ಏರಿ ಒಡೆದು ಹೋಗಿ, ಕೃಷಿ ಭೂಮಿ ನೀರು ನುಗ್ಗಿದ್ದು ಅಪಾರ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ತಾಲ್ಲೂಕಿನ ಹೊಣಕೆರೆ ಹೋಬಳಿಯ ಮಲ್ಲೇಗೌಡನ ಕೊಪ್ಪಲಿನ ಕೆರೆಯ ತೂಬಿನ ಬಳಿ ದಿನಗಳ ಹಿಂದೆ ಬಿರುಕು ಬಿಟ್ಟಿತ್ತು. ಹೇಮಾವತಿ ನಾಲೆಯಿಂದ ನೀರು ಹರಿಸಿ ಕೆರೆಯನ್ನು ತುಂಬಿಸಲಾಗಿತ್ತು. ಶನಿವಾರ ಬೆಳಿಗ್ಗೆ ಕೆರೆಯ ಏರಿ ಒಡೆದು ತೂಬು ಇದ್ದ ಜಾಗ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.
ಕೆರೆಯ ನೀರು ಅಪಾರ ಪ್ರಮಾಣದಲ್ಲಿ ಹರಿದು ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೆ ನೀರು ನುಗ್ಗಿದೆ. ಟೊಮೆಟೊ, ಬೀನ್ಸ್, ಜೋಳ, ಈರುಳ್ಳಿ,ಸೌತೆ, ರಾಗಿ, ಮಣ್ಣು ಸಮೇತ ತೊಳೆದು ಹೋಗಿವೆ, ಬಾಳೆ, ಅಡಿಕೆ, ತೆಂಗು ಬೆಳೆಗಳು ನೆಲಕಚ್ಚಿವೆ. ರೈತರಿಗೆ ಅಪಾರ ಹಾನಿ ಸಂಭವಿಸಿದೆ. ಈ ಕೆರೆಯು ಮಲ್ಲೇಗೌಡನಹಳ್ಳಿ, ಹುರುಳಿಗಂಗನಹಳ್ಳಿ, ಚಾಗಟಗಳ್ಳಿ, ಹೆತ್ತಗೋನಹಳ್ಳಿ, ಹುಚ್ಚಕಲ್ಲೇಗೌಡನಕೊಪ್ಪಲು, ಮತ್ತೀಕೆರೆ ವ್ಯಾಪ್ತಿಯ ನೂರಾರು ಎಕರೆ ಜಮೀನಿಗೆ ನೀರನ್ನು ಪೂರೈಸುತ್ತಿತ್ತು. ಏರಿ ಒಡೆಯುವ ಮುನ್ನ ಕೆಲ ರೈತರು ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಲು ಇಟ್ಟಿದ್ದ ಈರುಳ್ಳಿ ಮತ್ತು ತೆಂಗಿನ ಕಾಯಿ ಕೊಚ್ಚಿ ಹೋಗಿವೆ ಎಂದು ದೂರಿದ್ದಾರೆ.
‘ 30 ಗುಂಟೆಯಲ್ಲಿ ಬೆಳೆದಿದ್ದ ಬೀನ್ಸ್ ಬೆಳೆಯಲ್ಲಿ 15 ಗುಂಟೆಯಷ್ಟು ಹಾನಿಯಾಗಿದೆ. ಹೊಲದಲ್ಲಿದ್ದ 10 ಕ್ಕೂ ಹೆಚ್ಚು ತೆಂಗಿನ ಸಸಿಗಳು ಕೊಚ್ಚಿ ಹೋಗಿವೆ, ಜಮೀನಿನ ಮಣ್ಣು ಕೊರೆದು ಹಾಳಾಗಿದೆ. ತೋಟದಲ್ಲಿ ಬಿಟ್ಟಿದ್ದ ಎರಡುಮೂರು ಸಾವಿರ ತೆಂಗಿನಕಾಯಿಗಳು ಕೊಚ್ಚಿ ಹೋಗಿವೆ. ₹ 1 ಲಕ್ಷದಷ್ಟು ನಷ್ಟವಾಗಿದೆ’ ಎಂದು ರೈತ ನರಸಿಂಹ ಮೂರ್ತಿ ಹೇಳಿದರು.
‘1.25 ಎಕರೆಯಲ್ಲಿ ಅಡಿಕೆ ಸಸಿ ಬೆಳೆಸಿದ್ದು, ₹65 ಸಾವಿರದ ಕೊಟ್ಟಿಗೆ ಗೊಬ್ಬರವನ್ನು ತರಲಾಗಿತ್ತು. ಎಲ್ಲವೂ ಕೊಚ್ಚಿಹೋಗಿವೆ. ₹ 80 ಸಾವಿರ ವೆಚ್ಚದ ಹನಿ ನೀರಾವರಿಯ ಪೈಪುಗಳು ಕಿತ್ತು ಕೊಚ್ಚಿಕೊಂಡು ಹೋಗಿವೆ. ಮತ್ತೆ ಮಣ್ಣನ್ನು ಹಾಕಿಸಲು ಸುಮಾರು ₹1.5 ಲಕ್ಷ ವೆಚ್ಚವಾಗುತ್ತದೆ. ಸ್ಥಳಕ್ಕೆ ಅಧಿಕಾರಿಗಳು ಕೆಲವೇ ಕಡೆಗಳಿಗೆ ಭೇಟಿ ನೀಡಿ ಹೋಗಿದ್ದಾರೆ’ ಎಂದು ಹುರುಳಿಗಂಗನಹಳ್ಳಿ ರೈತ ಕೃಷ್ಣೇಗೌಡ ಹೇಳಿದರು.
‘ಕೆರೆಯ ತೂಬಿನ ಜಾಗದಲ್ಲಿ ಮೊದಲೇ ಸ್ವಲ್ಪ ನೀರು ಸೋರಿಕೆಯಾಗುತ್ತಿತ್ತು. ಹೇಮಾವತಿ ನೀರಾವರಿ ನಿಗಮದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕೆರೆ ಏರಿ ದುರಸ್ತಿ ಮಾಡಲು ಯೋಜನೆ ಮಾಡಿಕೊಂಡಿದ್ದೇವೆ. 15 ದಿನದೊಳಗೆ ಏರಿಯನ್ನು ನಿರ್ಮಾಣ ಮಾಡಲು ಕ್ರಮವಹಿಸುತ್ತೇವೆ’ ಎಂದು ಹೇಮಾವತಿ ನೀರಾವರಿ ನಿಗಮದ ಎಇ ಎಚ್.ಕೆ.ಮನು ತಿಳಿಸಿದ್ದಾರೆ.
ಜನ ಏನಂತಾರೆ?: ಮಲ್ಲೇಗೌಡನ ಹಳ್ಳಿಯ ಕೆರೆ ಹೇಮಾವತಿ ನಾಲೆಯಿಂದ ನೀರು ತುಂಬಿಸಿದ್ದರಿಂದ ರೈತರು ಸಂತಸಗೊಂಡಿದ್ದರು. ಆದರೆ ಕೆರೆಯ ತೂಬಿನ ಬಳಿ ಹಿಂದೆಯೇ ಬಿರುಕು ಬಿಟ್ಟಿತ್ತು. ಅಧಿಕಾರಿಗಳು ಸರಿಪಡಿಸದೆ ಕೇವಲ ಮರಳಿನ ಚೀಲ ಇಡಿಸಿದ್ದರು. ಕೆರೆ ತುಂಬಿದಾಗ ನೀರಿನ ಒತ್ತಡಕ್ಕೆ ಏರಿಯೇ ಒಡೆದು ಹೋಗಿದೆ ಎಂದು ಗ್ರಾಮದ ರೈತರು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.