
ಮಂಡ್ಯ: ನಾಲೆ ಅಭಿವೃದ್ಧಿ ಕಾಮಗಾರಿಗೆ ಜಮೀನು ನೀಡಿದ್ದ ರೈತನಿಗೆ ಪರಿಹಾರ ನೀಡಲು ನಿರ್ಲಕ್ಷ್ಯ ತೋರಿದ್ದ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯ ಸಾಮಗ್ರಿಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಮಂಗಳವಾರ ಜಪ್ತಿ ಮಾಡಲಾಯಿತು.
ಮದ್ದೂರು ತಾಲ್ಲೂಕಿನ ಹೆಬ್ಬೆರಳು ಗ್ರಾಮದ ರೈತ ಜವರೇಗೌಡ ಮತ್ತು ನ್ಯಾಯಾಲಯದ ಸಿಬ್ಬಂದಿಯು ಕಚೇರಿಯಲ್ಲಿದ್ದ ಪೀಠೋಪಕರಣ, ಕಂಪ್ಯೂಟರ್, ಜೆರಾಕ್ಸ್ ಯಂತ್ರವನ್ನು ಜಪ್ತಿ ಮಾಡಿದರು.
ಜವರೇಗೌಡ ಅವರಿಗೆ ಸೇರಿದ 1.17 ಎಕರೆ ಜಮೀನನ್ನು ಮುತ್ತುರಾಯಕೆರೆ ಪೋಷಕ ನಾಲೆ ನಿರ್ಮಾಣಕ್ಕಾಗಿ ಕಾವೇರಿ ನೀರಾವರಿ ನಿಗಮ ವಶಪಡಿಸಿಕೊಂಡಿತ್ತು. ಆ ಜಮೀನಿಗೆ ಸಂಬಂಧಿಸಿ ರೈತನಿಗೆ ಸ್ವಲ್ಪ ಮಾತ್ರ ಪರಿಹಾರ ನೀಡಲಾಗಿತ್ತು. ಇನ್ನೂ ₹84 ಲಕ್ಷ ಪರಿಹಾರ ನೀಡುವುದು ಬಾಕಿ ಇತ್ತು.
ಪರಿಹಾರ ಸಿಗದ ಕಾರಣ ರೈತ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ರೈತನಿಗೆ ₹84 ಲಕ್ಷ ಪರಿಹಾರ ನೀಡುವಂತೆ ಕಾವೇರಿ ನೀರಾವರಿ ನಿಗಮಕ್ಕೆ 2022ರಲ್ಲೇ ಸೂಚಿಸಿತ್ತು. ನ್ಯಾಯಾಲಯದ ಆದೇಶವಿದ್ದರೂ ಅಧಿಕಾರಿಗಳು ರೈತನಿಗೆ ಪರಿಹಾರ ನೀಡದೆ ನಿರ್ಲಕ್ಷ್ಯ ತೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.