ಪಾಂಡವಪುರ: ‘ಬೆಂಗಳೂರಿನ ಉದ್ಯಮಿ ನಾಗರಾಜು ಎಂಬುವವರು ಒಪ್ಪಂದದಂತೆ ಸಂಪೂರ್ಣ ಹಣ ನೀಡದೆ ಜಮೀನುಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ’ ಎಂದು ದೂರಿ ತಾಲ್ಲೂಕಿನ ಗಿರಿಯಾರಹಳ್ಳಿಯ ಸವಿತಾ ಅವರ ಪತಿ ದರಸಗುಪ್ಪೆ ರವಿ ಮತ್ತು ಲಕ್ಷ್ಮಿ ಎಂಬುವರ ಅಕ್ಕನ ಮಗ ಗಿರಿಯಾರಹಳ್ಳಿ ಹರೀಶ್, ಸಬ್ ರಿಜಿಸ್ಟರ್ ಟಿ.ವೆಂಕಟೇಶ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಎರಡು ತಿಂಗಳ ಹಿಂದೆ ಸವಿತಾ ಅವರ 1.18 ಎಕರೆ ಜಮೀನನ್ನು ₹70ಲಕ್ಷಕ್ಕೆ ಮತ್ತು ಲಕ್ಷ್ಮಿ ಅವರ 1 ಎಕರೆ ಜಮೀನನ್ನು ₹68 ಲಕ್ಷಕ್ಕೆ ಖರೀದಿಸುವುದಾಗಿ ಉದ್ಯಮಿ ತಿಳಿಸಿ ಜಮೀನಿನ ಕ್ರಯದ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಕ್ರಮವಾಗಿ ಇಬ್ಬರಿಗೆ ₹2.50 ಲಕ್ಷದ ಚೆಕ್ ಮತ್ತು ₹1.15ಲಕ್ಷ ಮೊತ್ತದ ಬೆಂಗಳೂರಿನ ರಾಜರಾಜೇಶ್ವರಿ ನಗರದ ವೈಶ್ಯ ಬ್ಯಾಂಕ್ ಚೆಕ್ ನೀಡಿದ್ದರು. ಚೆಕ್ ನಗದೀಕರಣವಾಗಿತ್ತು.
‘ಕೆಲವು ದಿನಗಳ ಬಳಿಕ ಬಂದ ಉದ್ಯಮಿಯು, ಉಳಿಕೆ ಹಣ ನೀಡುವುದಾಗಿ ಹೇಳಿ, ನಮ್ಮನ್ನು ಉಪನೋಂದಣಾಧಿಕಾರಿ ಕಚೇರಿಗೆ ಕರೆದೊಯ್ದು ನೋಂದಣಿ ಮಾಡಿಸಿಕೊಂಡರು. ಆದರೆ ಉಳಿಕೆ ಹಣ ನೀಡಲಿಲ್ಲ. ಒತ್ತಾಯಿಸಿದ ಬಳಿಕ, ಬೆಂಗಳೂರಿನ ರಾಜರಾಜೇಶ್ವರಿ ನಗರದ ಕರೂರು ವೈಶ್ಯ ಬ್ಯಾಂಕ್ ಹಾಗೂ ಜೆ.ಪಿ.ನಗರದ ಪುಟ್ಟೇನಹಳ್ಳಿ ಶಾಖೆಯ ಆಂಧ್ರಬ್ಯಾಂಕ್‌ನ ಚೆಕ್‌ಗಳನ್ನು ನೀಡಿದ್ದರು. ಆದರೆ ಅವು ತಿರಸ್ಕೃತಗೊಂಡವು’ ಎಂದು ಆರೋಪಿಸಿದ್ದಾರೆ.
‘ಒಂದು ಬಾರಿ ನೋಂದಣಿಯಾದ ಆಸ್ತಿಯನ್ನು ತಡೆಹಿಡಿಯಲಾಗದು. ಜಿಲ್ಲಾ ಉಪನೋಂದಣಾಧಿಕಾರಿಯು ಎಲ್ಲಾ ತಾಲ್ಲೂಕುಗಳ ನೋಂದಣಾಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದರೆ, ಪರಭಾರೆ ಮಾಡದಂತೆ ತಡೆಯಬಹುದು’ ಎಂದು ಅಧಿಕಾರಿ ಟಿ.ವೆಂಕಟೇಶ್, ದೂರುದಾರರು ಹಾಗೂ ಸ್ಥಳದಲ್ಲಿದ್ದ ರೈತ ಮುಖಂಡರಾದ ಕೆ.ಎಸ್.ನಂಜುಂಡೇಗೌಡ, ಕೆನ್ನಾಳು ವಿಜಯಕುಮಾರ್, ಕನ್ನಂಬಾಡಿ ಸುರೇಶ್ ಅವರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.