ಕೆ.ಆರ್.ಪೇಟೆ: ತಾಲ್ಲೂಕಿನಲ್ಲಿ ಕೆಲವು ನ್ಯಾಯಬೆಲೆ ಅಂಗಡಿಗಳು ಪಡಿತರ ವಿತರಣಾ ಕೇಂದ್ರಗಳಲ್ಲಿ ಪಡಿತರ ಕಾರ್ಡ್‌ಗೆ ಇಂತಿಷ್ಟು ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿದ್ದು, ಇದು ಸತ್ಯವಾದರೆ ನೋಟಿಸ್ ಜಾರಿ ಮಾಡಬೇಕಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಎ.ಬಿ. ಕುಮಾರ್ ಎಚ್ಚರಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಬಿಪಿಎಲ್ ಪಡಿತರದಾರರಿಗೆ ಅಕ್ಕಿ ಸೇರಿ ಹಲವು ಪಡಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಯಾರೂ ಯಾವ ಕಾರಣಕ್ಕೂ ಹಣ ನೀಡುವಂತಿಲ್ಲ ಮತ್ತು ವಸೂಲಿ ಮಾಡುವಂತಿಲ್ಲ. ಹಣ ವಸೂಲಿಯ ಬಗ್ಗೆ ದೂರುಗಳು ಬಂದಿರುವುದರಿಂದ ಆಹಾರ ಇಲಾಖೆಯವರು ತನಿಖೆ ನಡೆಸಿ ಕ್ರಮ ವಹಿಸಬೇಕು. ದೂರು ಸತ್ಯವಾದರೆ ಅಂತಹ ಸೊಸೈಟಿ ಮತ್ತು ನ್ಯಾಯಬೆಲೆ ಅಂಗಡಿ ನಡೆಸುವವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಶಿರಸ್ತೇದಾರ್ ಪೂರ್ಣಿಮಾ ಅವರಿಗೆ ಸೂಚಿಸಿದರು.
ಶಿರಸ್ತೇದಾರ್ ಪೂರ್ಣಿಮಾ ಮಾತನಾಡಿ, ‘ತಾಲ್ಲೂಕಿನಲ್ಲಿ 99 ನ್ಯಾಯ ಬೆಲೆ ಅಂಗಡಿಗಳಿದ್ದು, ಒಟ್ಟು ಸುಮಾರು 69,910 ಬಿಪಿಎಲ್ ಕಾರ್ಡ್‌ಗಳಿವೆ. ದೂರು ಬಂದಿರುವ ನ್ಯಾಯಬೆಲೆ ಅಂಗಡಿಗಳಿಗೆ ಕಾರಣ ಕೇಳಿ ಈಗಾಗಲೇ ನೋಟಿಸ್ ಜಾರಿ ಮಾಡಲಾಗುತ್ತಿದೆ. ಪಡಿತರ ವಸ್ತುಗಳನ್ನು ತಿಂಗಳಿಡೀ ನೀಡಬೇಕು. ಯಾವುದೇ ಕಾರಣಕ್ಕು ಡಿಜಿಟಲ್ ಸಹಿ ಪಡೆದುಕೊಳ್ಳಲು ಒಂದು ದಿನ, ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಮತ್ತೊಂದು ದಿನ ನಿಗದಿ ಪಡಿಸುವಂತಿಲ್ಲ. ಗ್ರಾಹಕ ಬಂದ ದಿನ ಡಿಜಿಟಲ್ ಸಹಿ ಪಡೆದು ಸ್ಥಳದಲ್ಲಿಯೇ ಪಡಿತರ ವಸ್ತುಗಳನ್ನು ವಿತರಣೆ ಮಾಡಬೇಕು. ತೂಕದಲ್ಲಿ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ’ ಎಂದರು.
ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟಸ್ವಾಮಿ, ಕೆ.ಎಸ್.ಆರ್.ಟಿ.ಸಿ ಡಿಪೋ ಮ್ಯಾನೇಜರ್ ವನಿತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ಪದ್ಮಾ ತಮ್ಮ ಇಲಾಖೆಗಳ ಪ್ರಗತಿಯ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯದರ್ಶಿ ಕೆ.ಸುಷ್ಮಾ ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಿಷಯ ನಿರ್ವಾಹಕಿ ಕೆ.ಚೈತ್ರಾ, ಸಮಿತಿಯ ಸದಸ್ಯರಾದ ಸಿ.ಆರ್.ಪಿ.ಕುಮಾರ್, ಬಂಡಿಹೊಳೆ ಯೋಗೇಶ್(ಉಮೇಶ್), ದೊಡ್ಡತಾರಹಳ್ಳಿ ಸೋಮಶೇಖರ್, ಶ್ಯಾಮಣ್ಣ, ಕನಕದಾಸನಗರ ಶಿವಮ್ಮ, ಬೊಮ್ಮೇನಹಳ್ಳಿ ಲತಾ, ಕೆ.ಎಸ್.ಆರ್.ಟಿ.ಸಿ ಶಿವಣ್ಣ, ಸಿಂಧುಘಟ್ಟ ಆಫೀಜ್ ಉಲ್ಲಾ, ಯಗಚಗುಪ್ಪೆ ಶಿವಲಿಂಗಪ್ಪ ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.