ADVERTISEMENT

ದೌರ್ಜನ್ಯ ತಡೆಗೆ ಕಾನೂನು ಅರಿವು ಅಗತ್ಯ

ಅಸ್ಪೃಶ್ಯತೆ ನಿವಾರಣೆಗೆ ಸಾಮಾಜಿಕ ಪರಿವರ್ತನೆ ಅಗತ್ಯ: ಜಿಲ್ಲಾಧಿಕಾರಿ ಕುಮಾರ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 5:40 IST
Last Updated 7 ಜನವರಿ 2026, 5:40 IST
–
   

ಮಂಡ್ಯ: ‘ಸಮಾಜದ ಎಲ್ಲ ವರ್ಗದವರಿಗೂ ಕಾನೂನಿನ ಅರಿವು ಮೂಡಿಸುವ ಕಾರ್ಯಾಗಾರ ಅಗತ್ಯವಿದ್ದು, ಕಾನೂನಿನ ಅರಿವು ಇದ್ದಾಗ ಮಾತ್ರ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಕುಮಾರ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ಪ್ರತಿಬಂಧ ) ಅಧಿನಿಯಮ 1989 (ತಿದ್ದುಪಡಿ) ಅಧಿನಿಯಮ 2015 ಮತ್ತು ನಿಯಮಗಳು 1995 (ತಿದ್ದುಪಡಿ) ನಿಯಮಗಳು ಮತ್ತು ನಾಗರಿಕ ಹಕ್ಕು ರಕ್ಷಣಾ ಕಾಯ್ದೆ 1955ರನ್ವಯ ಆಯೋಜಿಸಿದ್ದ ವಿಚಾರಗೋಷ್ಠಿ ಮತ್ತು ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಪ್ರತಿಬಂಧ ಕಾಯ್ದೆಯ ಸದಸ್ಯರು ಮುತುವರ್ಜಿ ವಹಿಸಿ ಪ್ರಯತ್ನ ಪಟ್ಟರೆ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಯಶಸ್ವಿಗೊಳಿಸಬಸಹುದು. ಸದರಿ ಕಾಯ್ದೆಯಡಿ ನ್ಯಾಯಾಲಯಗಳಿಗೆ ಸಾಕ್ಷಿ ಹೇಳಲು ಬರುವ ಸಾಕ್ಷಿದಾರರಿಗೆ ಧೈರ್ಯ ತುಂಬುವ ಕೆಲಸವಾಗಬೇಕು ಎಂದರು.

ADVERTISEMENT

ಎಲ್ಲಾ ದೌರ್ಜನ್ಯ ಪ್ರಕರಣಗಳನ್ನು ಕಾನೂನಿನ ಮೂಲಕವೇ ಪರಿಹರಿಸುತ್ತೇವೆ ಎಂದರೆ ಪ್ರಯೋಜನವಿಲ್ಲ ಸಮಾಜದಲ್ಲಿ ಮನಪರಿವರ್ತನೆ ಆಗಬೇಕು. ಜನರಿಗೆ ಅರಿವು ಹೆಚ್ಚಾಗಬೇಕು. ಹೀಗಿದ್ದಾಗ ಮಾತ್ರ ಸಮಾಜದಿಂದ ಅಸ್ಪೃಶ್ಯತೆ ಹೋಗಲಾಡಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ. ಶ್ರೀನಿವಾಸ್, ಮಂಡ್ಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ರಾಜೇಶ್ ಎಚ್.ಸಿ. ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಎಸ್‌ಸಿ–ಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಶಿಕ್ಷೆ ಪ್ರಮಾಣ ಕಡಿಮೆ ಆಗುತ್ತಿದೆ. ನ್ಯಾಯಾಲಯದಲ್ಲಿ ಸಾಕ್ಷಿಗಳ ಕೊರತೆ ಇದ್ದು ಈ ಕಾಯ್ದೆಯ ಕುರಿತು ಜನರಿಗೆ ಅರಿವು ಮೂಡಿಸಬೇಕು
ಆನಂದ್‌ ಎಂ ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.