ADVERTISEMENT

ಕಾವೇರಿ ಆರತಿ ಮಾಡುವ ಮೊಂಡುತನ ಸರ್ಕಾರ ಬಿಡಲಿ

ಸಿಪಿಐಎಂ ಪ್ರಚಾರಾಂದೋಲನದಲ್ಲಿ ಸಿ.ಕುಮಾರಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 16:04 IST
Last Updated 25 ಜೂನ್ 2025, 16:04 IST
ಮಂಡ್ಯ ನಗರದ ತಮಿಳು ಕಾಲೋನಿಯಲ್ಲಿ ಸಿಪಿಐಎಂ(ಮಂಡ್ಯ ವಲಯ) ವತಿಯಿಂದ ನಡೆದ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿ.ಕುಮಾರಿ ಚಾಲನೆ ನೀಡಿ ಮಾತನಾಡಿದರು 
ಮಂಡ್ಯ ನಗರದ ತಮಿಳು ಕಾಲೋನಿಯಲ್ಲಿ ಸಿಪಿಐಎಂ(ಮಂಡ್ಯ ವಲಯ) ವತಿಯಿಂದ ನಡೆದ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿ.ಕುಮಾರಿ ಚಾಲನೆ ನೀಡಿ ಮಾತನಾಡಿದರು    

ಮಂಡ್ಯ: ರೈತರು ಮತ್ತು ಅಣೆಕಟ್ಟೆಗೆ ಮಾರಕವಾಗಿರುವ ಅಮ್ಯೂಸ್‌ಮೆಂಟ್‌ ಪಾರ್ಕ್‌ ಯೋಜನೆ ಹಾಗೂ ಕಾವೇರಿ ಆರತಿ ಮಾಡುತ್ತೇವೆಂದು ಮೊಂಡುತನ ಪ್ರದರ್ಶಿಸುವ ಸರ್ಕಾರದ ನಡೆ ಖಂಡನೀಯವಾಗಿದ್ದು, ಈ ಎರಡು ಯೋಜನೆಗಳನ್ನು ತಕ್ಷಣ ಕೈಬಿಡಬೇಕೆಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯೆ ಸಿ.ಕುಮಾರಿ ಆಗ್ರಹಿಸಿದರು.

ನಗರದ ತಮಿಳು ಕಾಲೊನಿಯಲ್ಲಿ ಸಿಪಿಐಎಂ(ಮಂಡ್ಯ ವಲಯ) ವತಿಯಿಂದ ಬುಧವಾರ ನಡೆದ ಪ್ರಚಾರಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರಿಗೆ ₹5,500 ಪ್ರತಿ ಟನ್ ಕಬ್ಬಿಗೆ ನೀಡಬೇಕು. ಜೊತೆಗೆ ಜಿಲ್ಲೆಯಲ್ಲಿರುವ ಸಕ್ಕರೆ ಕಾರ್ಖಾನೆಗಳು ಪುನರಾರಂಭಗೊಳ್ಳಬೇಕು. ಮೈಷುಗರ್‌ ಕಾರ್ಖಾನೆಯು ಸರ್ಕಾರಿ ಸ್ವಾಮ್ಯದಲ್ಲಿಯೇ ಶೀಘ್ರವೇ ಆಧುನೀಕರಣಗೊಳ್ಳಬೇಕು. ಕೂಲಿ ಕಾರ್ಮಿಕರು, ಬಡವರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಗ್ರೇಟರ್‌ ಬೆಂಗಳೂರು ನಿರ್ಮಾಣದಿಂದ ಮಂಡ್ಯ ಜಿಲ್ಲೆಯ ಮೇಲೆ ಉಂಟಾಗುವ ಹಾನಿ ತಡೆಗಟ್ಟಲು ಸಮಗ್ರ ಯೋಜನೆಯನ್ನು ರೂಪಿಸಬೇಕು. ದಲಿತರ ಮೇಲಿನ ನಡೆಯುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಕಾವೇರಿ ಆರತಿಯನ್ನು ವಾರದಲ್ಲಿ ಮೂರು ದಿನ ಮಾಡುತ್ತೇವೆ ಎನ್ನುವುದು ಮೂರ್ಖತನದ ಪರಮಾವಧಿ ಆಗಿದೆ. ಈಗಾಗಲೇ ನೀಡಿರುವ ಹೇಳಿಕೆಯನ್ನು ಮಂಡ್ಯ ಶಾಸಕರು ಹಿಂಪಡೆಯಬೇಕು. ಇನ್ನಾದರೂ ಚಳವಳಿಗಾರರಿಗೆ ಗೌರವ ನೀಡಬೇಕು ಎಂದು ಆಗ್ರಹ ಪಡಿಸಿದರು.

ಸಿಪಿಐ(ಎಂ) ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ್, ಮುರುವಾಯಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಾಧ, ಶ್ರೀಧರ್, ಫರ್ವೀನ್‌ತಾಜ್‌, ಪ್ರೇಮಾ, ರೇಣುಕಾ, ಲಕ್ಷ್ಮಣ್‌, ಸವಿತಾ, ಜ್ಯೋತಿ, ಶೋಭಾ, ನಾರಾಯಣ್‌ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.