ಮಂಡ್ಯ ನಗರದ ಡಿಎಚ್‌ಒ ಕಚೇರಿಯಲ್ಲಿ ಕೃತಿ ಕರ್ತೃ ಮಂಜುನಾಥ ಅದ್ದೆ ಅವರ ‘ಒಡಲ ತುಡಿತಕ್ಕೆ ಕೇಡು’ (ಹೆಣ್ಣು ಭ್ರೂಣ ಹತ್ಯೆ–ಒಂದು ಅಧ್ಯಯನ) ಕೃತಿಯನ್ನು ರೈತ ಸಂಘದ ಮುಖಂಡರಾದ ಸುನಂದಾ ಜಯರಾಂ ಅವರು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭಾಗವಹಿಸಿದ್ದರು
ಮಂಡ್ಯ: ‘ಹೆಣ್ಣು ಭ್ರೂಣ ಹತ್ಯೆ ನಡೆಸಿದವರಿಗೆ ಶಿಕ್ಷೆ ಆಗಿದೆಯಾ ಎಂಬುದೇ ತಿಳಿಯುತ್ತಿಲ್ಲ. ಇದನ್ನು ಬಹಿರಂಗಗೊಳ್ಳುವ ಮೂಲಕ ಸಮಾಜಕ್ಕೆ ಸಂದೇಶ ನೀಡುವಂತಾಗಲಿ. ಭ್ರೂಣ ಹತ್ಯೆಗಳ ಕೃತ್ಯಕ್ಕೆ ಕಡಿವಾಣ ಹಾಕಬೇಕು’ ಎಂದು ರೈತ ನಾಯಕಿ ಸುನಂದಾ ಜಯರಾಂ ಒತ್ತಾಯಿಸಿದರು.
ನಗರದ ಡಿಎಚ್‌ಒ ಕಚೇರಿಯ ಜೆ.ಎಲ್.ಜವರೇಗೌಡ ಸಭಾಂಗಣದಲ್ಲಿ ವಿಮೋಚನಾ ಮಹಿಳಾ ಹಕ್ಕುಗಳ ವೇದಿಕೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಒಡಲ ತುಡಿತಕ್ಕೆ ಕೇಡು’ (ಹೆಣ್ಣು ಭ್ರೂಣ ಹತ್ಯೆ–ಒಂದು ಅಧ್ಯಯನ) ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
2023 ಅಂಕಿ ಅಂಶವೇ ಹೇಳಿರುವಂತೆ 6,646 ಭ್ರೂಣ ಹತ್ಯೆ ಕಿಟ್ ವಿತರಣೆ ಆಗಿದೆ. ವೈದ್ಯರೊಬ್ಬರೇ 244 ಕಿಟ್‌ಗಳನ್ನು ತೆಗೆದುಕೊಂಡಿರುವುದು ತನಿಖೆಯಿಂದ ತಿಳಿದುಬಂದಿದೆ. ಅದನ್ನು ಯಾರ ಮೇಲೆ ಪ್ರಯೋಗಿಸಲಾಗಿದೆ ಎಂಬುದನ್ನು ಕಂಡು ಹಿಡಿಯಬೇಕು. ಪ್ರತಿ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಗರ್ಭಿಣಿ ತಪಾಸಣೆಗೆ ಒಳಪಟ್ಟರೆ ಅದರ ಅಂಕಿ ಅಂಶವು ದೇಶದಲ್ಲಿ ಏಕಕಾಲದಲ್ಲಿ ಸಿಗುವ ಯೋಜನೆ ಜಾರಿಗೆ ತರಬೇಕು. ಹೀಗಿದ್ದಾಗ ಮಾತ್ರ ಹೆಣ್ಣು ಭ್ರೂಣ ಹತ್ಯೆ ತಡೆಯಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ ಕುಮಾರ ಹಾಗೂ ಪುಸ್ತಕ ಕುರಿತು ಪ್ರಾಧ್ಯಾಪಕಿ ಎಚ್.ಎಂ.ಹೇಮಲತಾ ಅವರು ಮಾತನಾಡಿದರು. ಡಿಎಚ್‌ಒ ಡಾ.ಕೆ. ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಕೃತಿ ಕರ್ತೃ ಮಂಜುನಾಥ ಅದ್ದೆ ಅವರ ‘ಒಡಲ ತುಡಿತಕ್ಕೆ ಕೇಡು’(ಹೆಣ್ಣು ಭ್ರೂಣ ಹತ್ಯೆ–ಒಂದು ಅಧ್ಯಯನ) ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಬೆಟ್ಟಸ್ವಾಮಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ವಿಮೋಚನಾ ಸಮಿತಿಯ ಕಾರ್ಯದರ್ಶಿ ಸೆಲಿನ್ ಸುಗುಣ, ಜನಾರ್ದನ್, ಇಂಪನಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.