ADVERTISEMENT

ನ್ಯಾಯಾಲಯ ಆವರಣದಲ್ಲಿ ಕ್ಯಾಂಟೀನ್‌ ಇರಲಿ: ಎಂ.ಭೃಂಗೇಶ್‌

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:28 IST
Last Updated 21 ಜುಲೈ 2024, 14:28 IST
<div class="paragraphs"><p>ಮಂಡ್ಯದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಕ್ಯಾಂಟೀನ್‌ ಕಟ್ಟಡ (ಉಪಾಹಾರ ಮಂದಿರ)ದ ನಿರ್ಮಾಣಕ್ಕೆ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಭೃಂಗೇಶ್‌ ಅವರು ಚಾಲನೆ ನೀಡಿದರು. </p></div>

ಮಂಡ್ಯದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಲಯದ ಕ್ಯಾಂಟೀನ್‌ ಕಟ್ಟಡ (ಉಪಾಹಾರ ಮಂದಿರ)ದ ನಿರ್ಮಾಣಕ್ಕೆ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಭೃಂಗೇಶ್‌ ಅವರು ಚಾಲನೆ ನೀಡಿದರು.

   

ಮಂಡ್ಯ: ‘ವಕೀಲರು ಒತ್ತಡದಿಂದ ಕೆಲಸ ಮಾಡುವ ಸಂದರ್ಭವಿದೆ. ಇದರಿಂದ ಕ್ಷಣವಾದರೂ ಸ್ವಲ್ಪ ಸಮಾಧಾನ ತರಿಸುವ ಕೇಂದ್ರವೆಂದರೆ ಅದು ಉಪಾಹಾರ ಮಂದಿರವಾಗಿದೆ. ಇದು ಎಲ್ಲ ನ್ಯಾಯಾಲಯದ ಆವರಣದಲ್ಲಿಯೂ ಇರಬೇಕು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಭೃಂಗೇಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ನ್ಯಾಯಾಲಯ, ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ನ್ಯಾಯಾಲಯದ ಕ್ಯಾಂಟೀನ್‌ ಕಟ್ಟಡ (ಉಪಾಹಾರ ಮಂದಿರ)ದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ADVERTISEMENT

‘ಕಳೆದ ಕೆಲವು ವರ್ಷಗಳಿಂದಲೂ ಇಲ್ಲಿ ಕ್ಯಾಂಟೀನ್‌ ನಿರ್ಮಾಣ ಮಾಡಬೇಕೆಂಬುದನ್ನು ವಕೀಲರು ಮನವಿ ಮಾಡುತ್ತಲೇ ಇದ್ದರು. ಇಂದು ಆ ಕಾಲ ಕೂಡಿ ಬಂದಿದೆ, ಈ ಕ್ಯಾಂಟೀನ್‌ ವಕೀಲರ ಒತ್ತಡ ಕಡಿಮೆ ಮಾಡುವ ಕೇಂದ್ರವಾಗಿ ಬದಲಾಗಲಿ, ಅದರ ಮೂಲಕ ತಮ್ಮ ಕ್ಷಕ್ಷಿದಾರರಿಗೆ ಮತ್ತಷ್ಟು ಅಚ್ಚುಕಟ್ಟಾಗಿ ಹಾಗೂ ಸಮಾಧಾನ ಚಿತ್ತದಿಂದ ನ್ಯಾಯ ಕೊಡಿಸುವ ಗಮನಹರಿಸಲಿ’ ಎಂದು ಸಲಹೆ ನೀಡಿದರು.

‘ಬೆಳಿಗ್ಗೆಯಿಂದಲೇ ವಕೀಲರ ಕೆಲಸ ಶುರುವಾಗಿ ಬಿಡುತ್ತದೆ. ಆ ಸಂದರ್ಭದಲ್ಲಿ ಕೆಲವು ವಕೀಲರು ದೂರದ ಊರುಗಳಿಂದ ಅಥವಾ ಪಟ್ಟಣಗಳಿಂದ ಬರುವವರು ಇರುತ್ತಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಅವರು ಬೆಳಗಿನ ಉಪಾಹಾರಮಾಡದೆ ಬಂದಿರುವ ಉದಾಹರಣೆಗಳು ಸಾಕಷ್ಟಿವೆ. ಅದನ್ನು ಗಮನದಲ್ಲಿಟ್ಟುಕೊಂಡೇ ಅವರ ಆರೋಗ್ಯ ದೃಷ್ಟಿಯಿಂದ ಶುಚಿತ್ವದಿಂದ ಕೂಡಿರುವ ಕ್ಯಾಂಟೀನ್ ನಮ್ಮ ನ್ಯಾಯಾಲಯದಲ್ಲಿ ಅವಶ್ಯಕತೆ ಇತ್ತು. ಹಾಗಾಗಿ ಇಲ್ಲಿ ಕ್ಯಾಂಟೀನ್ ನಿರ್ಮಾಣಕ್ಕೆ ಚಾಲನೆ ನೀಡಿದ್ದಾಗಿ’ ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಟಿ.ರಾಜೇಂದ್ರ ಮಾತನಾಡಿ, ‘ನಮ್ಮ ನ್ಯಾಯಾಲಯದ ಆವರಣದಲ್ಲಿ ಹೋಟೆಲ್‌ ಆಗಬೇಕೆನ್ನುವ ಬಹುದಿನಗಳ ಕನಸು ಈಗ ನನಸಾಗಿದೆ. ಮತ್ತಷ್ಟು ಸೌಲಭ್ಯಗಳನ್ನು ನಮ್ಮ ವಕೀಲರಿಗೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವೆ. ಕ್ಯಾಂಟೀನ್‌ ಕಟ್ಟಡವನ್ನು ಶೀಘ್ರವಾಗಿ ಸ್ಥಾಪಿಸಿ ನ್ಯಾಯಾಧೀಶರ ಸಹಕಾರದಿಂದ ಆದಷ್ಟು ಬೇಗ ವಕೀಲರಿಗೆ ಸೇವೆ ಸಿಗುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಎಚ್‌.ಎಲ್.ವಿಶಾಲ ರಘು, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ್‌, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಜಿ.ರಾಜು ಹಾಗೂ ವಕೀಲರು  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.