
ಮಳವಳ್ಳಿ (ಮಂಡ್ಯ ಜಿಲ್ಲೆ): ‘ಧರ್ಮದ ಹೆಸರಿನಲ್ಲಿ ಬಡಿದಾಡಬಾರದು, ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಕನಿಷ್ಠ ಎಂದು ಆಲೋಚಿಸುವ ಬದಲು ಸತ್ಯದ ಕಡೆ ಕೊಂಡೊಯ್ಯುವ ಯಾವುದೇ ಧರ್ಮವಾದರೂ ಸರಿ ಅದನ್ನು ನಾವು ಗೌರವಿಸಬೇಕು’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕರೆ ನೀಡಿದರು.
ಪಟ್ಟಣದ ಶಾಂತಿ ಕಾಲೇಜು ಮುಂಭಾಗದ ಪ್ರದೇಶದಲ್ಲಿ ನಡೆಯುತ್ತಿರುವ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿ ಅವರ 1066ನೇ ಜಯಂತ್ಯುತ್ಸವದಲ್ಲಿ ನಾಲ್ಕನೇ ದಿನವಾದ ಗುರುವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಮ್ಮ ನಾಡಿನ ಮಠಗಳ ಪರಂಪರೆ ಮತ್ತು ಸಂಪ್ರದಾಯ ಉಳಿಯಬೇಕೆಂದರೆ ಇಂಥ ಅನೇಕ ಕಾರ್ಯಕ್ರಮ ಅವಶ್ಯವಿದೆ. ಸತ್ಯದ ಹಾದಿಯಲ್ಲಿ ಸಾಗುವ ಎಲ್ಲ ಧರ್ಮಗಳನ್ನು ಗೌರವಿಸುವ ಕೆಲಸ ಮಾಡಬೇಕು. ದೇವರು ಮತ್ತು ಗ್ರಂಥಗಳ ವಿಚಾರದಲ್ಲಿ ಭೇದ ಸಲ್ಲದು, ಜಗತ್ತು ಸಂಕೀರ್ಣವಾದ ಕಾಲ ಘಟ್ಟದಲ್ಲಿ ಜೀವನ ಸಾಗಿಸುತ್ತಿದ್ದೇವೆ ಎನ್ನುವ ದೃಷ್ಟಿ ನಮ್ಮಲ್ಲಿರಬೇಕು. ದೇವರು ಮತ್ತು ಧರ್ಮದ ವಿಚಾರದಲ್ಲಿ ಕಿತ್ತಾಡಿಕೊಳ್ಳುವ ಮನಸ್ಥಿತಿಯಿಂದ ನಾವು ಹೊರಬರಬೇಕು’ ಎಂದರು.
ಇಂತಹ ಧಾರ್ಮಿಕ ಸತ್ಸಂಗ ಕಾರ್ಯಮಗಳಲ್ಲಿ ಪಾಲ್ಗೊಳ್ಳುವುದರಿಂದ ಸಮಾಜದಲ್ಲಿನ ಅಹಿಷ್ಣುತೆ ಹೋಗಲಾಡಿಸುವುದರ ಜತೆಗೆ ಜನರ ಮನದಲ್ಲಿ ವಿಶಾಲವಾದ ಮನೋಭಾವ ಮೂಡಿಸಿ ಸಮಾನತೆಯ ಭಾವನೆ ಮೂಡಲು ಸಾಧ್ಯವಾಗುತ್ತದೆ. ಸುತ್ತೂರು ಶ್ರೀಮಠ ಎಲ್ಲ ಧರ್ಮಗಳನ್ನು ಒಂದೂಗೂಡಿಸಿ ಭಾವೈಕ್ಯ ಸಾರಲಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಶ್ರೀಮಠವನ್ನು ಗೌರವಿಸುತ್ತಿದ್ದಾರೆ ಎಂದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನಕಪುರ ದೇಗುಲ ಮಠದ ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಲೂರು ಬೃಹನ್ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಹಾಂತ ಸ್ವಾಮೀಜಿ, ಹೊಸಹಳ್ಳಿ ಮಠದ ಓಂಕಾರ ಸ್ವಾಮಿ, ಬೆಳಕವಾಡಿ ಮಠದ ಸರ್ಪಭೂಷಣ ಸ್ವಾಮಿ, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಮುರುಗೇಶ್ ಆರ್.ನಿರಾಣಿ, ಮಾಜಿ ಶಾಸಕ ಕೆ.ಅನ್ನದಾನಿ, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಉದ್ಯಮಿಗಳಾದ ಎಸ್.ನಿಶಾಂತ್, ಎಂ.ಆರ್.ಉಮಾಪತಿ ಪಾಲ್ಗೊಂಡಿದ್ದರು.
ಹಾಡು ಹೇಳಿ ರಂಜಿಸಿದ ಶಿವಣ್ಣ
‘ವಿಚಾರ ಲಹರಿ’ ಕೃತಿ ಬಿಡುಗಡೆಗೊಳಿಸಿ ಚಲನಚಿತ್ರ ನಟ ಶಿವರಾಜ್ ಕುಮಾರ್ ಮಾತನಾಡಿ, ನಾಡಿನಲ್ಲಿ ಸುತ್ತೂರು ಮಠದ ಸೇವೆ ಅನನ್ಯವಾಗಿದೆ. ನಮ್ಮ ಕುಟುಂಬ ಹಿಂದಿನಿಂದಲೂ ಮಠದೊಂದಿಗೆ ಬಾಂಧವ್ಯ ಹೊಂದಿದೆ ಎಂದು ಸ್ಮರಿಸಿದರು.
‘ಮುತ್ತಣ್ಣ ಪೀಪಿ ಊದುವ ಮುತ್ತಣ್ಣ ಡೋಲು ಬಡಿಯುವ’, ‘ಗೊಂಬೆ ಹೇಳುತೈತೆ’ ಮುಂತಾದ ಗೀತೆಗಳನ್ನು ಹಾಡಿ, ನೃತ್ಯ ಮಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
‘ಹೆತ್ತವರನ್ನು ವೃದ್ಧಾಶ್ರಮಕ್ಕೆ ದೂಡಬೇಡಿ’
ಸಾಮಾಜಿಕ ಭಾವೈಕ್ಯ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಉಡುಪಿಯ ‘ಜಮಾತ್-ಎ-ಇಸ್ಲಾಮಿ ಹಿಂದ್’ ಕಾರ್ಯದರ್ಶಿ ಅಕ್ಬರ್ ಅಲಿ ಅವರು, ‘ನಾಡಿನಲ್ಲಿ ಮಾನವೀಯತೆ ಮೌಲ್ಯ ಕುಸಿಯುತ್ತಿದೆ. ಅನೇಕರು ಹೆತ್ತ ತಂದೆ ತಾಯಂದಿರನ್ನು ವೃದ್ಧಾಪ್ಯದಲ್ಲಿ ನೋಡಿಕೊಳ್ಳಲು ಹಿಂಜರಿದು ವೃದ್ಧಾಶ್ರಮಕ್ಕೆ ದೂಡುತ್ತಿದ್ದಾರೆ. ಬಾಲ್ಯದಿಂದ ತಮ್ಮನ್ನು ಪೋಷಿಸಿದವರನ್ನು ಕಾಪಾಡಿಕೊಳ್ಳಬೇಕಾದ ಜವಾಬ್ದಾರಿ ಅರಿತುಕೊಳ್ಳಬೇಕಾಗಿದೆ’ ಎಂದರು.
ತಾನು ನಂಬಿದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡು ಎಲ್ಲ ಜಾತಿ ಧರ್ಮಗಳ ಜೊತೆಗೂಡಿ ಸಾಮರಸ್ಯದಿಂದ ನಾಡಿನಲ್ಲಿ ಬಾಳುವುದೇ ಭಾವೈಕ್ಯದ ಸಂಕೇತ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.