ADVERTISEMENT

ಶ್ರೀರಂಗಪಟ್ಟಣ: ಕುದುರೆ ನಂಬಿದವರ ಬದುಕು ದುಸ್ತರ

ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಗಣಂಗೂರು ನಂಜೇಗೌಡ
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಪ್ರವಾಸಿಗರ ನಿರೀಕ್ಷೆಯಲ್ಲಿ ಕುದುರೆಗಳ ಮಾಲೀಕರು
ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ ಬಳಿ ಪ್ರವಾಸಿಗರ ನಿರೀಕ್ಷೆಯಲ್ಲಿ ಕುದುರೆಗಳ ಮಾಲೀಕರು   

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧವಾದ ಈ ಪ್ರವಾಸಿ ತಾಣದಲ್ಲಿ ಕುದುರೆಗಳನ್ನೇ ನಂಬಿ ಬದುಕುವ ಜನರು ಕೊರೊನಾ ವೈರಸ್‌ ಕಾರಣದಿಂದಾಗಿ ಕಷ್ಟಕ್ಕೆ ಸಿಲುಕಿದ್ದಾರೆ.

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯ, ಗಂಜಾಂ ನಿಮಿಷಾಂಬಾ ದೇಗುಲ, ಟಿಪ್ಪು ಸಮಾಧಿ ಸ್ಥಳವಾದ ಗುಂಬಸ್‌, ಜಾಮಿಯಾ ಮಸೀದಿ ಇನ್ನಿತರ ತಾಣಗಳಿಗೆ ಬರುವ ಪ್ರವಾಸಿಗರನ್ನು ಕುದುರೆ ಮೇಲೆ ಕೂರಿಸಿ ಒಂದಷ್ಟು ಕಾಸು ಗಳಿಸಿ ಬದುಕುತ್ತಿದ್ದವರು ಈಗ ದಿನದ ಖರ್ಚಿಗೂ ಪರದಾಡುತ್ತಿದ್ದಾರೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಎಲ್ಲ ಪ್ರವಾಸಿ ತಾಣಗಳು ಭಣಗುಡುತ್ತಿದ್ದರೂ ಯಾರಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಕುದುರೆಗಳ ಮಾಲೀಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಪಟ್ಟಣ ಮತ್ತು ಗಂಜಾಂ ಆಸುಪಾಸಿನ ಪ್ರವಾಸಿ ತಾಣಗಳಲ್ಲಿ 50ಕ್ಕೂ ಹೆಚ್ಚು ಜನರು ಕುದುರೆಗಳನ್ನೇ ನೆಚ್ಚಿ ಬದುಕುತ್ತಿದ್ದಾರೆ. ಮಹಾರಾಷ್ಟ್ರ ಇತರ ಕಡೆಗಳಿಂದ ಲಕ್ಷಗಟ್ಟಲೆ ಹಣ ಕೊಟ್ಟು ಕುದುರೆಗಳನ್ನು ಖರೀದಿಸಿ ತಂದಿದ್ದಾರೆ. ಕುದುರೆಗಳ ಮೇಲೆ ಪ್ರವಾಸಿಗರನ್ನು ಕೂರಿಸಿ, ಒಂದೆರಡು ಸುತ್ತು ಹಾಕಿಸಿ ಅವರಿಂದ ₹20 ಇಲ್ಲವೆ ₹30 ಪಡೆದು ಹೊಟ್ಟೆ ಹೊರೆಯುತ್ತಿದ್ದವರು ಈಗ ದಿಗ್ಮೂಢರಾಗಿದ್ದಾರೆ.

ADVERTISEMENT

ಕೊರೊನಾ ವೈರಸ್‌ ಹರಡುವ ಭೀತಿಯಿಂದಾಗಿ ಜಿಲ್ಲಾಡಳಿತ ಮಾರ್ಚ್‌ 22ರಿಂದ ಪಟ್ಟಣ ಹಾಗೂ ಆಸುಪಾಸಿನ ಎಲ್ಲ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ. ಐತಿಹಾಸಿಕ ದೇವಾಲಯಗಳು, ಮಸೀದಿ, ಚರ್ಚುಗಳು, ಧ್ವನಿ ಮತ್ತು ಬೆಳಕು ತಾಣಗಳಾದಿಯಾಗಿ ಎಲ್ಲವೂ ಬಂದ್‌ ಆಗಿವೆ. ಒಬ್ಬ ಪ್ರವಾಸಿಗರೂ ಇತ್ತ ಸುಳಿಯದ ಕಾರಣ ಕುದುರೆಗಳನ್ನು ನಡೆಸುವವರ ನಡೆಯೇ ನಿಂತು ಹೋಗಿದೆ!

‘ಒಂದು ಕುಟುಂಬವನ್ನು ನಿರ್ವಹಿಸಬಹುದು. ಆದರೆ ಒಂದು ಕುದುರೆಯನ್ನು ಸಾಕುವುದು ಅದಕ್ಕಿಂತಲೂ ದುಬಾರಿ. ಪ್ರವಾಸಿಗರಿಂದಾಗಿ ದಿನಕ್ಕೆ ₹500ರಿಂದ ₹800ರವರೆಗೆ ಗಳಿಸುತ್ತಿದ್ದ ನಮಗೆ ಈಗ ಸಾಲ ಮಾಡಿ ಕುದುರೆಗಳನ್ನು ಸಾಕುವ ಸ್ಥಿತಿ ಬಂದಿದೆ’ ಎಂದು ಕುದುರೆ ಮಾಲೀಕ ಸುಲೇಮಾನ್‌ ಹೇಳಿದರು.

ಕುದುರೆ ಸಾಕಣೆ ದುಬಾರಿ

ಒಂದು ಕುದುರೆ ಸಾಕಲು ದಿನವೊಂದಕ್ಕೆ ₹300ರಿಂದ ₹400 ಖರ್ಚು ಮಾಡಬೇಕು. ಹುರುಳಿ, ಬೂಸಾ, ಹಿಂಡಿ, ಹಸಿ ಹುಲ್ಲು ಕೊಡಲೇ ಬೇಕು. ಇಲ್ಲದಿದ್ದರೆ ಕುದುರೆಗಳು ಸೊರಗುತ್ತವೆ. ಬಡಕಲಾದರೆ ಯಾರೂ ಹತ್ತುವುದಿಲ್ಲ. ಮಾರಾಟವೂ ಕಷ್ಟ. ಲಾಕ್‌ಡೌನ್‌ ಸ್ಥಿತಿಯಿಂದಾಗಿ ಕಳೆದ ಮೂರು ವಾರಗಳಿಂದ ಬಿಡಿಗಾಸೂ ಸಂಪಾದನೆಯಾಗುತ್ತಿಲ್ಲ. ಕುದುರೆಯನ್ನು ಮಾರಲೂ ಆಗದೆ, ಇಟ್ಟುಕೊಳ್ಳಲೂ ಆಗದೆ ಕಷ್ಟಕ್ಕೆ ಸಿಕ್ಕಿಕೊಂಡಿದ್ದೇವೆ’ ಎಂದು ಕಳೆದ 30 ವರ್ಷಗಳಿಂದ ಕುದುರೆ ನಡೆಸುವ ಕುಮಾರ್‌ ತಮ್ಮ ಕಷ್ಟ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.