ಮುಸ್ಲಿಂ ಮುಖಂಡ ಹಾಗೂ ಹಾಲಿ ಪುರಸಭಾ ಸದಸ್ಯರಾದ ಆದಿಲ್ ಅಲಿ ಖಾನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಸೇರಿದಂತೆ ವಿವಿಧ ಹಿಂದುತ್ವ ಪರ ಮುಖಂಡರು ಎಸ್.ಪಿ ಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಸೋಮವಾರ ಮದ್ದೂರಿನ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.
ಮದ್ದೂರು: ಪಟ್ಟಣದ ಮುಸ್ಲಿಂ ಮುಖಂಡ ಹಾಗೂ ಹಾಲಿ ಪುರಸಭಾ ಸದಸ್ಯ ಆದಿಲ್ ಅಲಿ ಖಾನ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಸೇರಿದಂತೆ ವಿವಿಧ ಹಿಂದುತ್ವ ಪರ ಮುಖಂಡರು ಎಸ್.ಪಿ ಸ್ವಾಮಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಸೋಮವಾರ ದೂರು ಸಲ್ಲಿಸಿದರು.
ಈ ವೇಳೆ ಬಿಜೆಪಿ ಮುಖಂಡ, ಮನ್‌ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿ ಮಾತನಾಡಿ, ಕಳೆದ ವಾರ ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನಾ ಮೆರವಣಿಗೆಯ ವೇಳೆ ನಡೆದಿದ್ದ ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆಲ ದಿನಗಳ ಹಿಂದೆ ನಡೆದ ಪ್ರಗತಿಪರ ಸಭೆಯಲ್ಲಿ ಪುರಸಭಾ ಸದಸ್ಯ ಹಾಗೂ ಜಾಮಿಯ ಮಸೀದಿ ಅಧ್ಯಕ್ಷರೂ ಆಗಿರುವ ಆದಿಲ್ ರವರು ಹೋರಾಟಕ್ಕೆ ತನು, ಮನ, ಧನ ಅರ್ಪಿಸಿ ಸಹಾಯ ಮಾಡುವುದಾಗಿ ಹೇಳಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಈ ಗಲಭೆ ಸಂಭವಿಸಲು ತಮ್ಮ ಸಮುದಾಯದ ಕೆಲವು ಯುವಕರು ಕಾರಣ ಅವರಿಗೆ ಶಿಕ್ಷೆಯಾಗಲಿ ಎಂದು ಕ್ಷೇಮೆಯನ್ನೂ ಆದಿಲ್ ಕೇಳಿದ್ದರು. ಆದರೆ ಪ್ರವಾಸಿ ಮಂದಿರದಲ್ಲಿ ನಡೆದ ಪ್ರಗತಿಪರರ ಸಭೆಯಲ್ಲಿ ಉಲ್ಟಾ ಹೊಡೆದು ಹೋರಾಟಕ್ಕೆ ತನು ಮನ ಧನ ಸಹಾಯ ಮಾಡುವುದಾಗಿ ಹೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಶಾಂತಿಯತ್ತ ಮರಳುತ್ತಿರುವ ಮದ್ದೂರಿನಲ್ಲಿ ಇವರ ಇಂತಹ ಹೇಳಿಕೆಗಳು ಕೋಮು ಸಂಘರ್ಷಕ್ಕೆ ಕಾರಣ ಆಗಬಹುದು. ಆದ್ದರಿಂದ ಇವರ ವಿರುದ್ಧ ಕ್ರಮ ಕೈಗೊಂಡು ಬಂಧಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಸತೀಶ್, ಎಂ.ಸಿ. ಸಿದ್ದು, ಸಂತೋಷ್, ಅಭಿ, ಸುಧಾಕರ್, ನೈದಿಲೆ ಚಂದ್ರು, ಬ್ಯಾಂಕ್ ನಾಗೇಂದ್ರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.