ಮದ್ದೂರು: ಮುಂದಿನ ದಿನಗಳಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ತಂದು ಮದ್ದೂರು ನಗರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.
ಪಟ್ಟಣದ ನಗರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಮಂಗಳವಾರ ಅಧಕ್ಷೆ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಸದಸ್ಯ ಎಂ.ಐ. ಪ್ರವೀಣ್, ಪುರಸಭೆಯನ್ನು ನಗರಸಭೆ ಮಾಡಿದ್ದೀರಿ. ನಗರಸಭೆಯೆಂದು ನಾಮಫಲಕ ಹಾಕುವುದಕ್ಕೂ ಮೊದಲು ಈ ಬಗ್ಗೆ ಪೂರ್ವಭಾವಿ ಸಭೆ ಕರೆದು ಏಕೆ ಸದಸ್ಯರ ಅನುಮತಿ ಪಡೆಯಲಿಲ್ಲ? ನಗರಸಭೆಗೆ ಸೇರ್ಪಡೆಯಾದರೆ ಗ್ರಾಮ ಪಂಚಾಯಿತಿಯವರು ನ್ಯಾಯಾಲಯಕ್ಕೆ ಹೋಗುವ ತೀರ್ಮಾನ ಮಾಡಿರುವುದಾಗಿ ಅಂದೇ ತಿಳಿಸಿದ್ದರು. ಇದೆಲ್ಲ ಗೊತ್ತಿದ್ದೂ ಏಕಾಏಕಿ ನಾಮಫಲಕ ಅನಾವರಣ ಮಾಡಿದ್ದೀರಿ ಎಂದು ಅಧ್ಯಕ್ಷೆ ಕೋಕಿಲಾ ಅರುಣ್ ಅವರನ್ನು ಪ್ರಶ್ನಿಸಿದರು.
ಪಟ್ಟಣದಲ್ಲಿ ರಸ್ತೆಗಳು ಗುಂಡಿ ಬಿದ್ದಿವೆ. ಗುಂಡಿ ಮುಚ್ಚಿಸಿಲ್ಲ. ಕಚೇರಿಯಲ್ಲಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹಲವು ತಿಂಗಳಿನಿಂದ ಸಂಬಳ ನೀಡಿಲ್ಲ. ಪರಿಸ್ಥಿತಿ ಹೀಗಿರುವಾಗ ಪುರಸಭೆಯನ್ನು ನಗರಸಭೆಯನ್ನಾಗಿ ಯಾಕಾಗಿ ಮೇಲ್ದರ್ಜೆಗೇರಿಸಿದ್ದೀರಿ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ಎಂ. ಉದಯ್ ಅವರು, ಪಟ್ಟಣವಾಗಿರುವ ಮದ್ದೂರನ್ನು ನಗರವಾಗಿಸುವ ಉದ್ದೇಶದಿಂದಲೇ ಪುರಸಭೆಯನ್ನು ನಗರಸಭೆಯನ್ನಾಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ರಸ್ತೆಗಳನ್ನು ಹೊಸದಾಗಿ ಅಭಿವೃದ್ಧಿಪಡಿಸಲಾಗುವುದು. ಗೊರವನಹಳ್ಳಿ ರಸ್ತೆಯನ್ನೂ ನವೀಕರಿಸಿ ಅಭಿವೃದ್ಧಿ ಮಾಡಲಾಗುವುದು ಎಂದರು.
ಸದ್ಯದಲ್ಲೇ ಪಟ್ಟಣದ ಪ್ರಮುಖ ರಸ್ತೆ ಪೇಟೆ ಬೀದಿಯನ್ನು ವಿಸ್ತರಿಸಿ, ₹ 175 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು. 2.5 ಕಿ. ಮೀ ಉದ್ದದ ಈ ರಸ್ತೆಯಲ್ಲಿ ಸುಮಾರು 5 ವೃತ್ತಗಳನ್ನು ನಿರ್ಮಿಸಿ, ಮಹನೀಯರ ಹೆಸರನ್ನು ವೃತ್ತಗಳಿಗೆ ಇಟ್ಟು, ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದರು.
ಅದಕ್ಕೂ ಮೊದಲು ಸುಸಜ್ಜಿತವಾದ ಹೂವು, ತರಕಾರಿ ಮಾರುಕಟ್ಟೆಯನ್ನು ಹಳೇ ಬಸ್ ನಿಲ್ದಾಣದ ಬಳಿ ನಿರ್ಮಿಸಿ, ಅಲ್ಲಿಗೆ ಬೀದಿ ಬದಿಯ ವ್ಯಾಪಾರಿಗಳನ್ನೂ ಸ್ಥಳಾಂತರ ಮಾಡಲಾಗುವುದು. ಶಿವಪುರದ ಬಳಿ ಪ್ರತ್ಯೇಕವಾಗಿ ಮಾಂಸದ ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು.
ಕೊಪ್ಪ ವೃತ್ತ, ಕೊಲ್ಲಿ ಸರ್ಕಲ್, ಐ.ಬಿ. ಸರ್ಕಲ್‌ಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪವು ಕೆಟ್ಟುಹೋಗಿ ವರ್ಷವೇ ಕಳೆದಿದ್ದರೂ ದುರಸ್ತಿಯಾಗಿಲ್ಲ. ಕೂಡಲೇ ಕ್ರಮವಹಿಸಬೇಕು ಎಂದು ಸದಸ್ಯೆ ಸರ್ವಮಂಗಳ ಆಗ್ರಹಿಸಿದರು.
ಶವ ಸಾಗಿಸುವ ನಗರಸಭೆಯ ವಾಹನವನ್ನು ಶವ ಸಂಸ್ಕಾರಕ್ಕೆ ಕಳಿಸುವ ವೇಳೆ ಡೀಸೆಲ್‌ಗೆ ₹ 500 ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಡೀಸೆಲ್ ಶುಲ್ಕ ಪಡೆಯದೇ ಸಾರ್ವಜನಿಕರಿಗೆ ಉಚಿತವಾಗಿ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯ ಸಚಿನ್ ಆಗ್ರಿಹಿಸಿದರು. ಇದಕ್ಕೆ ಎಲ್ಲ ಸದಸ್ಯರೂ ಧ್ವನಿಗೂಡಿಸಿದರು.
ಸಭೆಯಲ್ಲಿ ಪ್ರಭಾರ ಪೌರಾಯುಕ್ತರಾದ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ, ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷೆ ಪ್ರಸನ್ನ, ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ ಸೇರಿ ಸದಸ್ಯರು ಹಾಗೂ ಆಧಿಕಾರಿಗಳು ಹಾಜರಿದ್ದರು.
₹175 ಕೋಟಿ ವೆಚ್ಚದಲ್ಲಿ ಪ್ರಮುಖ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಐದು ವೃತ್ತಗಳನ್ನು ನಿರ್ಮಿಸಿ, ಅವುಗಳಿಗೆ ಮಹನೀಯರ ಹೆಸರಿಡಲಾಗುವುದು ಹಳೇ ಬಸ್ ನಿಲ್ದಾಣದ ಬಳಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಯೋಜನೆ
‘ಯುಜಿಡಿ ಕಾಮಗಾರಿ ಅಪೂರ್ಣ: ಬಿಲ್ ಪಾವತಿಸಿದ್ದೇಕೆ’
ಈ ಹಿಂದೆ ಡಿ.ಸಿ. ತಮ್ಮಣ್ಣ ಅವರು ಶಾಸಕರಾಗಿದ್ದಾಗ 2 ನೇ ಹಂತದ ಒಳಚರಂಡಿ ಹಾಗೂ ಕುಡಿಯುವ ನೀರಿನ ಸರಬರಾಜು ಮಾಡುವ ಕಾಮಗಾರಿ ಸುಮಾರು ₹100 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಡೆದಿತ್ತು. ಆದರೆ ಅರ್ಧದಷ್ಟು ಕೆಲಸವೂ ನಡೆದಿಲ್ಲ. ಈ ಬಗ್ಗೆ ಎಷ್ಟೋ ಸಾರಿ ಸಾಮಾನ್ಯ ಸಭೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಯನ್ನು ಕರೆಸಿ ಮಾಹಿತಿ ಕೇಳಲಾಗಿತ್ತು. ಹೀಗಿದ್ದರೂ ಆ ಬಗ್ಗೆ ಸರಿಯಾದ ಕ್ರಮ ವಹಿಸದೇ ಕಾಮಗಾರಿಯ ಬಿಲ್ ಮೊತ್ತವನ್ನು ಸಂಬಂಧಪಟ್ಟ ಗುತ್ತಿಗೆದಾರನಿಗೆ ನೀಡಿರುವುದು ಎಷ್ಟು ಸರಿ ಎಂದು ಸದಸ್ಯರಾದ ಪ್ರವೀಣ್ ಸಚಿನ್ ಸೇರಿ ಹಲವು ಸದಸ್ಯರು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಶಾಸಕ ಕೆ. ಎಂ ಉದಯ್ ಮಧ್ಯೆ ಪ್ರವೇಶಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗೆ ಸ್ಪಷ್ಟನೆ ಕೇಳಿ ನೋಟಿಸ್ ನೀಡಿ. ಆಗ ಆ ಅಧಿಕಾರಿಯು ಕಾಮಗಾರಿ ನಡೆಸಿದ ಗುತ್ತಿಗೆದಾರನಿಗೆ ನೋಟೀಸ್ ನೀಡುತ್ತಾರೆ ಎಂದು ಅಧಿಕಾರಿಗಳಿಗೆ ಹಾಗೂ ಅಧ್ಯಕ್ಷರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.