ADVERTISEMENT

ಮದ್ದೂರು ಗಲಭೆ | 21 ಮಂದಿ ಬಂಧನ, ನಿಷೇಧಾಜ್ಞೆ ಜಾರಿ; ಇಂದು ‘ಬಂದ್‌’ಗೆ ಕರೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 0:28 IST
Last Updated 9 ಸೆಪ್ಟೆಂಬರ್ 2025, 0:28 IST
ಮದ್ದೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ‘ಪ್ರತಿಭಟನಾ ಮೆರವಣಿಗೆ’ ನಡೆಸುತ್ತಿದ್ದಾಗ ಮಸೀದಿ ಬಳಿ ಕಲ್ಲು ತೂರಾಟ ನಡೆಸಿದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ದೃಶ್ಯ
ಮದ್ದೂರು ಪಟ್ಟಣದಲ್ಲಿ ಸೋಮವಾರ ಬಿಜೆಪಿ, ಬಜರಂಗದಳ ಮತ್ತು ಹಿಂದುತ್ವಪರ ಕಾರ್ಯಕರ್ತರು ‘ಪ್ರತಿಭಟನಾ ಮೆರವಣಿಗೆ’ ನಡೆಸುತ್ತಿದ್ದಾಗ ಮಸೀದಿ ಬಳಿ ಕಲ್ಲು ತೂರಾಟ ನಡೆಸಿದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ದೃಶ್ಯ   

ಮದ್ದೂರು (ಮಂಡ್ಯ): ಗಣೇಶನ ಮೂರ್ತಿ ವಿಸರ್ಜನೆಯ ವೇಳೆ ಭಾನುವಾರ ರಾತ್ರಿ ನಡೆದಿದ್ದ ಕಲ್ಲು ತೂರಾಟ, ಸಂಘರ್ಷದಿಂದ ಪಟ್ಟಣದಲ್ಲಿ ಮೂಡಿದ್ದ ಬಿಗುವಿನ ಸ್ಥಿತಿ ಸೋಮವಾರವೂ ಮುಂದುವರಿಯಿತು. ಪಟ್ಟಣದಲ್ಲಿ ಸದ್ಯದ ಪರಿಸ್ಥಿತಿಯು ಬೂದಿ ಮುಚ್ಚಿದ ಕೆಂಡದಂತಿದೆ. 

ಕಲ್ಲು ತೂರಾಟ ಕೃತ್ಯ ಖಂಡಿಸಿ ಬಿಜೆಪಿ, ಬಜರಂಗದಳ ಕಾರ್ಯಕರ್ತರು ಸೋಮವಾರ ನಡೆಸಿದ ಪ್ರತಿಭಟನೆ ವೇಳೆ ಕೆಲವರು ಮಸೀದಿಯತ್ತ ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಜೊತೆಗೆ ವಾಗ್ವಾದವು ನಡೆಯಿತು.

ಎರಡೂ ಘಟನೆಗಳಿಗೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು ಒಟ್ಟು 21 ಮಂದಿಯನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರ ವಿಚಾರಣೆ ನಡೆದಿದೆ. ಮಂಗಳವಾರ ಬೆಳಿಗ್ಗೆವರೆಗೆ ಪಟ್ಟಣದಾದ್ಯಂತ ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.   

ADVERTISEMENT

ಸಂಘಟನೆಗಳ ಕರೆಯ ಮೇರೆಗೆ, ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಮಾಲೀಕರು ಸ್ವಯಂಪ್ರೇರಿತರಾಗಿ ಬಾಗಿಲು ಮುಚ್ಚಿ, ಅಘೋಷಿತ ‘ಮದ್ದೂರು ಬಂದ್‌’ಗೆ ಬೆಂಬಲ ಸೂಚಿಸಿದರು. ಶಾಲಾ–ಕಾಲೇಜು, ಸರ್ಕಾರಿ ಕಚೇರಿ, ಹಾಲಿನ ಬೂತ್‌, ಔಷಧ ಮಳಿಗೆಗಳು ತೆರೆದಿದ್ದವು. ಬಸ್‌, ಆಟೊ ಸಂಚರಿಸಿದವು. ಬಿಜೆಪಿ, ಬಜರಂಗದಳವು ಸೆಪ್ಟೆಂಬರ್ 9ರಂದು ‘ಮದ್ದೂರು ಬಂದ್‌’ಗೆ ಕರೆ ನೀಡಿದೆ. 

ಉಗ್ರನರಸಿಂಹಸ್ವಾಮಿ ದೇವಸ್ಥಾನದಿಂದ ಹೊರಟ ಮೆರವಣಿಗೆಯಲ್ಲಿದ್ದ ಸಾವಿರಾರು ಕಾರ್ಯಕರ್ತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೂವಿನ ಸರ್ಕಲ್‌ ಬಳಿ ವಿದ್ಯುತ್‌ ಕಂಬದಲ್ಲಿದ್ದ ಅನ್ಯ ಕೋಮಿನ ಬಾವುಟವನ್ನು ಕಾರ್ಯಕರ್ತರೊಬ್ಬರು ಕಿತ್ತು, ಭಗವಧ್ವಜ ಹಾರಿಸಿದರು. ಕಬ್ಬಿಣದ ಸಲಾಕೆ ತೋರಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದರು. 

ಕೆಮ್ಮಣ್ಣು ನಾಲೆ ವೃತ್ತ ಸಮೀಪದ ಮಸೀದಿ ಮುಂಭಾಗ ಕಾರ್ಯಕರ್ತರು, ಟೈರುಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಿದವರ ವಿರುದ್ಧ ಧಿಕ್ಕಾರ ಕೂಗಿದರು. ಮುಂದೆ ಸಾಗುವಂತೆ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್ಪಿ ಮನವಿ ಮಾಡಿದರೂ ಕದಲದೆ, ಅರ್ಧಗಂಟೆ ರಂಪಾಟ ನಡೆಸಿದರು. ಅದೇ ವೇಳೆ ಕೆಲವರು ಮಸೀದಿಯತ್ತ ಕಲ್ಲು ತೂರಾಟ ನಡೆಸಿದರು. ಪೊಲೀಸರು ಕೂಡಲೇ ಲಾಠಿ ಪ್ರಹಾರ ನಡೆಸಿ, ಗುಂಪನ್ನು ಚದುರಿಸಿದರು. ‘ಇಬ್ಬರು ಮಹಿಳೆಯರ ಮೇಲೆ ಲಾಠಿ ಬೀಸಿದ್ದಾರೆ’ ಎಂದು ಆರೋಪಿಸಿ, ಹೊಡೆತ ತಿಂದ ಮಹಿಳೆಯೊಬ್ಬರು ಬೀದಿಯಲ್ಲಿ ಬಿದ್ದು ಒದ್ದಾಡಿದರು.  

ಕೇಸರಿ ಧ್ವಜ ಹಿಡಿದು, ಅದೇ ಬಣ್ಣದ ಶಾಲುಗಳನ್ನು ಹೊದ್ದ ಪ್ರತಿಭಟನಾಕಾರರು ಬೆಂಗಳೂರು–ಮೈಸೂರು ಸರ್ವಿಸ್‌ ರಸ್ತೆ ತಡೆದರು. ತಾಲ್ಲೂಕು ಕಚೇರಿಗೂ ಮುತ್ತಿಗೆ ಹಾಕಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ಗಾಯಳುಗಳ ಯೋಗಕ್ಷೇಮ ವಿಚಾರಿಸಿದರು.

ಎಸ್ಪಿ ಮಲ್ಲಿಕಾರ್ಜನ ಬಾಲದಂಡಿ ನೇತೃತ್ವದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಮಸೀದಿ, ಪ್ರಮುಖ ವೃತ್ತ ಸೇರಿ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಸಂಜೆ, ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಪಥ ಸಂಚಲನ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.