
ಮದ್ದೂರು: ನಗರದ ವಿಶ್ವೇಶ್ವರಯ್ಯ ನಗರ 7ನೇ ಕ್ರಾಸ್‌ನ ಮನೆಯೊಂದರಲ್ಲಿ ಕಳ್ಳತನವಾಗಿದ್ದು, ₹1.5 ಲಕ್ಷ ರೂ ನಗದು ಸೇರಿದಂತೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ದೋಚಿದ್ದಾರೆ.
ಸೌಮ್ಯ ಮಹೇಶ್ ಎಂಬುವವರ ಮನೆಯಲ್ಲೇ ಕಳ್ಳತನವಾಗಿದ್ದು, ಮನೆಯವರು ಸೋಮವಾರ ಸಂಬಂಧಿಕರ ಊರಿಗೆ ಹೋಗಿ ಮಂಗಳವಾರ ರಾತ್ರಿ 10 ಘಂಟೆಗೆ ವಾಪಸ್ ಬಂದಾಗ ಮನೆಯಲ್ಲಿ ಕಳ್ಳತನವಾಗಿರುವುದು ಗೊತ್ತಾಗಿದೆ.
ಕಳ್ಳರು ಮನೆಯ ಗೇಟ್ ಬೀಗ ಒಡೆದು ನಂತರ ಮುಂಬಾಗಿಲಿನ ಲಾಕ್ ಅನ್ನು ಕಬ್ಬಿಣದ ಸಲಾಕೆಯಿಂದ ಮೀಟಿ ಮನೆಯ ಒಳಹೋಗಿ ರೂಮಿನ ಬೀರುವಿನಲ್ಲಿದ್ದ 148 ಗ್ರಾಂ ತೂಕದ ಚಿನ್ನಾಭರಣ, ₹1.5ಲಕ್ಷ ನಗದು ಹಾಗೂ ದೇವರಮನೆಯಲ್ಲಿದ್ದ ಸುಮಾರು 2.5 ಕೆ. ಜಿ ತೂಕದ ಬೆಳ್ಳಿ ಸಾಮಗ್ರಿ ಕಳವು ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದoತೆಯೇ ಸ್ಥಳಕ್ಕೆ ಸಿಪಿಐಗಳಾದ ನವೀನ್ ಕುಮಾರ್, ನಾರಾಯಣ್, ಪಿಎಸ್ಐಗಳಾದ ಮಂಜುನಾಥ್, ರವಿ ಸೇರಿದಂತೆ ಸಿಬ್ಬಂದಿ ಹಾಗೂ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು.
ಮನೆಯ ಮಾಲೀಕರಾದ ಸೌಮ್ಯ ಮಹೇಶ್ ರವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ನಗರದ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.