ADVERTISEMENT

ಮದ್ದೂರು: ₹16.49 ಕೋಟಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಭೂಮಿ ಪೂಜೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 6:46 IST
Last Updated 4 ಜನವರಿ 2026, 6:46 IST
ಮದ್ದೂರಿನ ವಿಶ್ವೇಶ್ವರಯ್ಯ ನಗರದ ಬಳಿ 3ನೇ ಹಂತದ ಒಳಚರಂಡಿ ಅಭಿವೃದ್ಧಿ ಹಾಗೂ ಅದರ ವ್ಯಾಪ್ತಿಯ ರಸ್ತೆಗಳ ₹16.49 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಶನಿವಾರ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಸದಸ್ಯರು, ಮುಖಂಡರು ಹಾಜರಿದ್ದರು 
ಮದ್ದೂರಿನ ವಿಶ್ವೇಶ್ವರಯ್ಯ ನಗರದ ಬಳಿ 3ನೇ ಹಂತದ ಒಳಚರಂಡಿ ಅಭಿವೃದ್ಧಿ ಹಾಗೂ ಅದರ ವ್ಯಾಪ್ತಿಯ ರಸ್ತೆಗಳ ₹16.49 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಎಂ. ಉದಯ್ ಶನಿವಾರ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಮಾಜಿ ಸದಸ್ಯರು, ಮುಖಂಡರು ಹಾಜರಿದ್ದರು    

ಮದ್ದೂರು: ನಗರದ 3ನೇ ಹಂತದ ಒಳಚರಂಡಿ ಅಭಿವೃದ್ಧಿ ಹಾಗೂ ಅದರ ಅದರ ವ್ಯಾಪ್ತಿಯಲ್ಲಿಯ ರಸ್ತೆಗಳ ಅಭಿವೃದ್ಧಿಪಡಿಸುತ್ತಿರುವ ₹16.49 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕೆ.ಎಂ. ಉದಯ್ ತಿಳಿಸಿದರು.

ನಗರದ ವಿಶ್ವೇಶ್ವರಯ್ಯ ನಗರದ ಬಳಿ ಶನಿವಾರ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ನಾನು ಶಾಸಕನಾಗುವ ಮೊದಲು ನಗರದ ಒಳಚರಂಡಿ ವ್ಯವಸ್ಥೆ ಹಳ್ಳ ಹಿಡಿದಿತ್ತು. ಎರಡನೇ ಹಂತದ ಕಾಮಗಾರಿಯು ಅಪೂರ್ಣವಾಗಿ ಜನರಿಗೆ ತೊಂದರೆಯಾಗುತ್ತಿತ್ತು. ಅಷ್ಟೇ ಅಲ್ಲದೇ ಈ ಹಿಂದೆ ಇದ್ದ ಒಳಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡದೇ ಇದ್ದದ್ದರಿಂದ ಒಳಚರಂಡಿಯ ಮಲಿನ ನೀರನ್ನು ಕೆಮ್ಮಣ್ಣು ನಾಲೆಗೆ ಬಿಡಲಾಗುತ್ತಿತ್ತು’ ಎಂದು ದೂರಿದರು.

ADVERTISEMENT

ಇದರಿಂದ ನಿವಾಸಿಗಳು ಕೆಟ್ಟ ವಾಸನೆ ಸಹಿಸಿಕೊಳ್ಳಬೇಕಾಗಿತ್ತು. ನಾಲೆಯ ನೀರು ತುಂಬಾ ಕಲುಷಿತವಾಗುತ್ತಿದ್ದು, ಆ ನೀರನ್ನು ಅಕ್ಕ ಪಕ್ಕದ ಗ್ರಾಮಗಳ ರೈತರು ತಮ್ಮ ಜಮೀನಿನ ಬೆಳೆಗಳಿಗೆ ಹಾಯಿಸಿಕೊಂಡು, ಅವರೂ ಚರ್ಮ ರೋಗದ ಭೀತಿ ಎದುರಿಸುತ್ತಿದ್ದರು. ವರ್ಷದ ಹಿಂದೆಯೇ ಕೆಮ್ಮಣ್ಣು ನಾಲೆಯ ಆಧುನೀಕರಣಕ್ಕೆ ₹100 ಕೋಟಿಗೂ ಹೆಚ್ಚು ಅನುದಾನ ತಂದು ಶಾಶ್ವತ ಯೋಜನೆ ರೂಪಿಸಿದ ಫಲವಾಗಿ ಇಂದು ಉತ್ತಮ ಕೆಲಸವಾಗುತ್ತಿದೆ ಎಂದರು.

ಮೂರನೇ ಹಂತದ ಒಳಚರಂಡಿ ಕಾಮಗಾರಿಗಾಗಿ ಸಂಬಂಧಪಟ್ಟ ಇಲಾಖೆಯ ಮೂಲಕ ₹16 ಕೋಟಿಗೂ ಹೆಚ್ಚಿನ ಅನುದಾನ ತಂದು ಭೂಮಿ ಪೂಜೆ ನೆರವೇರಿಸಿದ್ದೇನೆ. ಇದರಿಂದ ಇತರ ಕಾಮಗಾರಿಗಳು ಸೇರಿ ಶಿoಷಾ ನದಿಯ ಪಕ್ಕದಲ್ಲಿ 3ನೇ ಹಂತದ ತ್ಯಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಲಾಗುವುದು ಎಂದರು.

₹ 100 ಕೋಟಿ ವೆಚ್ಚದ ಕೆಮ್ಮಣ್ಣು ನಾಲಾ ಅಭಿವೃದ್ಧಿ ಕಾಮಗಾರಿಯು ಮುಂದಿನ 2 ತಿಂಗಳಿನಲ್ಲಿ ಪೂರ್ಣಗೊಳ್ಳಲಿದ್ದು, ನಂತರ ರೈತರ ಜಮೀನಿಗಳಿಗೆ ನೀರು ಹರಿಸಲಾಗುವುದು ಎಂದು ಅವರು ತಿಳಿಸಿದರು.

ಇದೇ ವೇಳೆ, ನಗರಸಭೆಗೆ ಗೆಜ್ಜಲಗೆರೆ ಗ್ರಾಮ ಸೇರ್ಪಡೆ ವಿರೋಧಿಸಿ ಗೆಜ್ಜಲಗೆರೆಯ ಗ್ರಾ.ಪಂ ಮುಂದೆ ಕೆಲವರು ನಡೆಸುತ್ತಿರುವ ಪ್ರತಿಭಟನೆ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅಭಿವೃದ್ಧಿ ದೃಷ್ಟಿಯಿಂದ ನಗರಸಭೆಗೆ ಸೇರಿಸಲಾಗಿದೆ. ಈ ಬಗ್ಗೆ ಮೊದಲೇ ಸಭೆಗೆ ಆಹ್ವಾನಿಸಿದ್ದೆ. ಆದರೆ ಅಲ್ಲಿನ ಕೆಲವು ಮುಖಂಡರು ಬರಲಿಲ್ಲ ಎಂದು ಶಾಸಕ ಉದಯ್‌ ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷೆ ಕೋಕಿಲಾ ಅರುಣ್, ಸದಸ್ಯರಾದ ಸಿದ್ದರಾಜು, ಪ್ರಸನ್ನ, ಕಮಲ್ ನಾಥ್, ಬಸವರಾಜು, ಸಚ್ಚಿನ್, ಮುಖಂಡರಾದ ಮಹಾಲಿಂಗಯ್ಯ, ಮಹದೇವಪ್ಪ, ನೀರಾವರಿ ಇಲಾಖೆಯ ಅಧಿಕಾರಿಗಳಾದ ನಾಗರಾಜು ಹಾಜರಿದ್ದರು.