
ಮದ್ದೂರು: ನಗರದ ವ್ಯಾಪ್ತಿಯಲ್ಲಿ ಎ ಖಾತಾ, ಬಿ ಖಾತಾಗಳನ್ನು ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವಾರ್ಡ್ ಅಭಿಯಾನ ನಡೆಸಿ ನಿವೇಶನದಾರರಿಗೆ ನೀಡಬೇಕೆಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.
ನಗರದ ನಗರಸಭೆಯಲ್ಲಿ ಶುಕ್ರವಾರ ನಡೆದ ಬಜೆಟ್ ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
‘ಜನಾಭಿಪ್ರಾಯಗಳನ್ನು ಆಧರಿಸಿ ಬಜೆಟ್ ಮಂಡನೆಯಾದರೆ ಅರ್ಥವಿರುತ್ತದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ ವಾಗಿರುವುದರಿಂದ ನೇರವಾಗಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ದೃಷ್ಟಿಯಿಂದ ಈ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ’ ಎಂದರು.
‘ನಗರದ ರಾಮ್ ರಹೀಮ್ ನಗರ ಹಾಗೂ ಚನ್ನೇಗೌಡ ಬಡಾವಣೆ ವ್ಯಾಪ್ತಿಯಲ್ಲಿನ 5.5 ಎಕರೆ ಜಾಗದಲ್ಲಿ 242 ಮನೆಗಳು ಹಲವು ದಶಕಗಳಿಂದ ಇವೆ. ಆದರೆ ಈವರೆಗೆ ಹಕ್ಕುಪತ್ರ ವಿತರಣೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡರೆ ನಗರಸಭೆಗೆ ವರಮಾನ ಬರುತ್ತದೆ’ ಎಂದು ಪುರಸಭಾ ಮಾಜಿ ಸದಸ್ಯ ಮನ್ಸೂರ್ ಅಲಿ ಖಾನ್ ತಿಳಿಸಿದರು.
‘ನಗರದ ವ್ಯಾಪ್ತಿಯಲ್ಲಿನ ಯುಜಿಡಿ ನೀರು ನೀರು ಸೇರಿದಂತೆ ಚರಂಡಿ ನೀರು ಶಿoಷಾ ನದಿಗೆ ಸೇರಿ ನದಿಯ ನೀರು ಕಲುಷಿತ ವಾಗುತ್ತಿರುವುದರಿಂದ ಪಕ್ಕದ ವೈದ್ಯನಾಥಪುರದ ಪುರಾಣ ಪ್ರಸಿದ್ಧ ವೈದ್ಯನಾಥೇಶ್ವರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ನದಿಯಲ್ಲಿ ಸ್ನಾನ ಮಾಡಲು ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲಿನ ನೀರು ನದಿಗೆ ಸೇರದಂತೆ ಕ್ರಮ ವಹಿಸಬೇಕು’ ಎಂದು ಗ್ರಾಮದ ನಿವಾಸಿ ಪ್ರಭು ಅಧಿಕಾರಿಗಳನ್ನು ಒತ್ತಾಯಿಸಿದರು.
ಇತ್ತೀಚೆಗೆ ಪೇಟೆ ಬೀದಿ ವಿಸ್ತರಣೆ ಮಾಡುವ ವೇಳೆ ಬೀದಿ ಬದಿಯ ವ್ಯಾಪಾರಸ್ಥರಿಗೆ ತೊಂದರೆಯಾಗಿರುವುದರಿಂದ ಅವರಿಗೆ ಕೂಡಲೇ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕೆಂದು ಸಾರ್ವಜನಿಕರೊಬ್ಬರು ಒತ್ತಾಯಿಸಿದರು.
ಸಭೆಯಲ್ಲಿ ಜಿಲ್ಲಾ ಯೋಜನಾ ನಿರ್ದೇಶಕರಾದ ನರಸಿಂಹಮೂರ್ತಿ, ನಗರಸಭಾ ಪೌರಾಯುಕ್ತೆ ರಾಧಿಕಾ ಸೇರಿದಂತೆ ಅಧಿಕಾರಿವರ್ಗ ಹಾಗೂ ಸಾರ್ವಜನಿಕರು ಹಾಜರಿದ್ದರು.