ADVERTISEMENT

ಮದ್ದೂರು ಪುರಸಭೆ: ಅಧ್ಯಕ್ಷೆ–ಸದಸ್ಯರ ನಡುವೆ ‘ಇ–ಖಾತಾ’ ಗದ್ದಲ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:32 IST
Last Updated 10 ಮಾರ್ಚ್ 2025, 12:32 IST
ಮದ್ದೂರಿನ ಪುರಸಭೆಯಲ್ಲಿ ಸೋಮವಾರ ವಿಶೇಷ ಸಭೆಯ ವೇಳೆ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಹಾಗೂ ಜೆಡಿಎಸ್ ಸದಸ್ಯರಾದ ಪ್ರಿಯಾಂಕ ಅಪ್ಪುಗೌಡ, ಮಹೇಶ್ ಅವರ ನಡುವೆ ವಾಕ್ಸಮರ ನಡೆಯಿತು
ಮದ್ದೂರಿನ ಪುರಸಭೆಯಲ್ಲಿ ಸೋಮವಾರ ವಿಶೇಷ ಸಭೆಯ ವೇಳೆ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಹಾಗೂ ಜೆಡಿಎಸ್ ಸದಸ್ಯರಾದ ಪ್ರಿಯಾಂಕ ಅಪ್ಪುಗೌಡ, ಮಹೇಶ್ ಅವರ ನಡುವೆ ವಾಕ್ಸಮರ ನಡೆಯಿತು   

ಮದ್ದೂರು: ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಕ್ಸಮರ, ಗದ್ದಲಕ್ಕೆ ಸೋಮವಾರ ನಡೆದ ಪುರಸಭೆ ವಿಶೇಷ ಸಭೆ ಸಾಕ್ಷಿಯಾಯಿತು.

ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಆರಂಭದಲ್ಲಿ ಟೆಂಡರ್‌ಗಳ ವಿಷಯಗಳು ಚರ್ಚೆಗಳಾದವು. ಆದರೆ ಪುರಸಭಾ ಅಧ್ಯಕ್ಷೆ ಅಕ್ರಮ ಇ–ಖಾತಾ ಮಾಡಿಸಿಕೊಂಡಿದ್ದಾರೆ ಎಂಬ ಆರೋಪದ ಸಂಬಂಧ ಕೋಲಾಹಲ ಸೃಷ್ಟಿಯಾಯಿತು.

ವಿಷಯಗಳು ಚರ್ಚೆಯಾದ ಬಳಿಕ ಜೆಡಿಎಸ್ ಸದಸ್ಯರಾದ ಪ್ರಿಯಾಂಕಾ ಅಪ್ಪುಗೌಡ ಹಾಗೂ ಮಹೇಶ್ ಅವರು ಎದ್ದು ನಿಂತು ‘ನೀವು ಪುರಸಭಾ ಅಧ್ಯಕ್ಷೆಯಾಗಿದ್ದೀರಿ, ಆದರೆ ನಿಮ್ಮ ಮೇಲೆ ಅಕ್ರಮವಾಗಿ ಇ– ಖಾತಾ ಮಾಡಿಸಿಕೊಂಡಿದ್ದೀರಿ, ನೀವೇ ಹೀಗೆ ನಿಯಮಬಾಹಿರವಾಗಿ ನಡೆದುಕೊಂಡಿದ್ದೀರಾ, ಈ ಬಗ್ಗೆ ಎಂದು ಏನು ಹೇಳುತ್ತೀರಿ’ ಎಂದು ಪ್ರಶ್ನಿಸಿದರು.

ADVERTISEMENT

ಈ ವೇಳೆ ಕೆಂಡಾಮಂಡಲರಾದ ಕೋಕಿಲಾ ಅರುಣ್, ‘ಇದು ನನ್ನ ವೈಯಕ್ತಿಕ ವಿಷಯವಾಗಿದ್ದು, ನಾನು ನಿಯಮಾನುಸಾರವಾಗಿಯೇ ಖಾತೆ ಮಾಡಿಸಿಕೊಂಡಿದ್ದೇನೆ. ಇಷ್ಟಕ್ಕೂ ಈ ವಿಷಯವನ್ನು ಸಭೆಗೆ ತರುವ, ಈ ಬಗ್ಗೆ ಮಾತನಾಡುವ ಅವಶ್ಯಕತೆಯಾದರೂ ಏನಿತ್ತು, ಎಂದು ಪ್ರಶ್ನಿಸಿದರು.

ಇಷ್ಟಕ್ಕೆ ಸುಮ್ಮನಾಗದ ಜೆಡಿಎಸ್ ಸದಸ್ಯರು, ಇದಕ್ಕೆ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಆಗ ಕೋಲಾಹಲ ಸೃಷ್ಟಿಯಾಯಿತು.

ಅಷ್ಟರಲ್ಲಿ ಸಭೆಯಲ್ಲಿದ್ದ ಕಾಂಗ್ರೆಸ್ ಸದಸ್ಯರು, ‘ಸುಮ್ಮನೆ ವೈಯಕ್ತಿಕ ವಿಷಯಗಳನ್ನು ಸಭೆಯಲ್ಲಿ ಏಕೆ ಮಾತನಾಡುತ್ತಿದ್ದೀರಿ, ಪುರಸಭೆಗೆ ಸಂಬಂಧಿಸಿದ ವಿಷಯವಿದ್ದರೆ ಮಾತ್ರ ಮಾತನಾಡಿ’ ಎಂದು ಅಧ್ಯಕ್ಷೆಯ ಪರ ನಿಂತರು.

ಈ ವೇಳೆ ಆಕ್ರೋಶಗೊಂಡ ಕೋಕಿಲಾ ಅವರು ವೇದಿಕೆಯಿಂದ ಎದ್ದು ಬಂದು ‘ಹೀಗೆ ವೈಯುಕ್ತಿಕ ವಿಷಯ ಚರ್ಚಿಸಿರುವುದರಿಂದ ನನಗೆ ನೋವಾಗಿದೆ. ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿರುವ ಮೂರ್ತಿ ಎಂಬುವರ ವಿರುದ್ಧ ₹50 ಲಕ್ಷ ಮಾನನಷ್ಟ ಮೊಕ್ಕದ್ದಮೆ ಹಾಕುತ್ತೇನೆ’ ಎಂದು ಜೆಡಿಎಸ್ ಸದಸ್ಯರ ವಿರುದ್ಧ ಗರಂ ಆದರು.

ಮದ್ದೂರಿನ ಪುರಸಭೆಯಲ್ಲಿ ಸೋಮವಾರ ವಿಶೇಷ ಸಭೆಯ ವೇಳೆ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಹಾಗೂ ಜೆಡಿಎಸ್ ಸದಸ್ಯರಾದ ಪ್ರಿಯಾಂಕ ಅಪ್ಪುಗೌಡ ಮಹೇಶ್ ಅವರ ನಡುವೆ ವಾಕ್ಸಮರ ನಡೆಯಿತು

ಈ ಪ್ರಸಂಗ ಸೃಷ್ಟಿಯಾಗುತ್ತಿದ್ದಂತೆಯೇ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಅಷ್ಟಕ್ಕೂ ಸುಮ್ಮನಾಗದೆ ಸಭಾಂಗಣದಿಂದ ಕೆಳಗಿರುವ ಪುರಸಭಾಧ್ಯಕ್ಷರ ಕೊಠಡಿಯ ಮುಂದೆಯೂ ಜಟಾಪಟಿ ಮುಂದುರಿಯಿತು.

ಕಾಂಗ್ರೆಸ್ ಸದಸ್ಯರು ಕೋಕಿಲಾ ಅವರನ್ನು ಅಧ್ಯಕ್ಷರ ಕೊಠಡಿಯ ಒಳಗೆ ಕರೆದುಕೊಂಡು ಹೋದ ಬಳಿಕ ಪರಿಸ್ಥಿತಿ ತಿಳಿಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.