ADVERTISEMENT

ಮದ್ದೂರು ನಗರಸಭೆಯಿಂದ ಗೆಜ್ಜಲಗೆರೆ ಕೈಬಿಡಲು ಆಗ್ರಹ:ಸದನದಲ್ಲೂ ಹೋರಾಟ; ಅಶೋಕ

ನಗರಸಭೆಯಿಂದ ಕೈಬಿಡುವಂತೆ 21 ದಿನದಿಂದ ನಡೆಯುತ್ತಿರುವ ಹೋರಾಟದಲ್ಲಿ ಭಾಗಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 5:42 IST
Last Updated 12 ಜನವರಿ 2026, 5:42 IST
ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ 21 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಭಾನುವಾರ ಪಾಲ್ಗೊಂಡು ಮಾತನಾಡಿದರು 
ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿ ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ 21 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಭಾನುವಾರ ಪಾಲ್ಗೊಂಡು ಮಾತನಾಡಿದರು    

ಮದ್ದೂರು: ಗೆಜ್ಜಲಗೆರೆಯನ್ನು ಮದ್ದೂರು ನಗರಸಭೆಯಿಂದ ಕೈಬಿಡದಿದ್ದರೆ ಸದನದಲ್ಲೂ ವಿಚಾರ ತೆಗೆದು ಹೋರಾಟ ಮಾಡಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಎಚ್ಚರಿಸಿದರು.

ತಾಲ್ಲೂಕಿನ ಗೆಜ್ಜಲಗೆರೆಯ ಗ್ರಾಮವನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ 21 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಭಾನುವಾರ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ಗಾಂಧೀಜಿ ಕನಸಿನ ‘ಗ್ರಾಮ ಸ್ವರಾಜ್ಯ’ಕ್ಕೆ ಇಲ್ಲಿನ ಶಾಸಕರು ಏನು ಬೆಲೆ ಕೊಟ್ಟಿದ್ದಾರೆ, ಸೇರ್ಪಡೆಗೂ ಮೊದಲೇ ಗ್ರಾಮಸ್ಥರ ಹಾಗೂ ಮುಖಂಡರ ಅಭಿಪ್ರಾಯ ಪಡೆಯದೇ ಇಲ್ಲಿನ ಶಾಸಕರು ದ್ರೋಹ ಮಾಡಿದ್ದಾರೆ. ಇಲ್ಲಿನ ಗ್ರಾಮ ಪಂಚಾಯಿತಿಗೆ  ಇಲ್ಲಿರುವ ಕೈಗಾರಿಕಾ ಪ್ರದೇಶದಿಂದ ಬರುತ್ತಿರುವ ಆದಾಯವನ್ನು ಗಮನಿಸಿ ಮದ್ದೂರಿನಿಂದ 6.5 ಕಿ.ಮೀ. ದೂರದ ಗ್ರಾಮವನ್ನು ಸೇರಿಸಲು ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ನಿಮ್ಮ ಗ್ರಾಮ ನಗರಸಭೆಗೆ ಸೇರ್ಪಡೆಯಾದರೆ ಕಂದಾಯ ಹತ್ತು ಪಟ್ಟು ಹೆಚ್ಚಾಗುವುದರ ಜೊತೆಗೆ ಕಸ ವಿಲೇವಾರಿ, ಕುಡಿಯುವ ನೀರು ಸೇರಿದಂತೆ ಎಲ್ಲದಕ್ಕೂ ತೆರಿಗೆ ಹೆಚ್ಚಾಗುತ್ತದೆ. ಎಲ್ಲವನ್ನೂ ನಗರ ಮಾಡಿದರೆ ಅನ್ನ ಬೆಳೆಯುವುದು ಎಲ್ಲಿಂದ? ಗ್ರಾಮ ಪಂಚಾಯಿತಿಗೆ ಸಿಗುವ ಸರ್ಕಾರದ ಯೋಜನೆಗಳು ಬರುವುದಿಲ್ಲ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪಾಪರ್ ಆಗಿದೆ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದವರೆಲ್ಲರನ್ನು ಸೇರಿಸಿದರೆ ಆಗುವಷ್ಟು ಸಾಲ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಮಾಡಿದ್ದಾರೆ, ಈ ಹಿಂದೆ ಗುಂಡೂರಾವ್ ಅವರ ಸರ್ಕಾರವನ್ನೇ ಬೀಳಿಸಿದ ಗೆಜ್ಜಲಗೆರೆಯನ್ನು ನಗರಸಭೆಗೆ ಸೇರಿಸಿರುವ ಕ್ರಮ ಸರಿಯಿಲ್ಲ’ ಎಂದರು.

‘ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದರೂ ಕ್ಯಾಬಿನೆಟ್ ಸಭೆಯಲ್ಲಿ ಅದನ್ನೇ ರದ್ದುಪಡಿಸಲು ನಿಮ್ಮಿಂದ ಸಾಧ್ಯ, ಒಂದು ವೇಳೆ ನೀವು ಇದನ್ನು ನೀವೇ ರದ್ದುಪಡಿಸದೆ ಮೊಂಡಾಟ ಮಾಡಿದರೆ ಮುಂದೆ ನಮ್ಮ ಸರ್ಕಾರ ಬಂದ ಮೇಲೆ ಮತ್ತೆ ಗ್ರಾಮ ಪಂಚಾಯತಿ ಮಾಡುತ್ತೇವೆ’ ಎಂದು ಹೇಳಿದರು.

ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಮಾತನಾಡಿ, ‘ನಾನು ಶಾಸಕನಾಗಿದ್ದಾಗ ಮದ್ದೂರು ಪುರಸಭೆಯನ್ನು ನಗರಸಭೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೆ. ಆದರೆ ಪುರಸಭಾ ಸದಸ್ಯರು ನಗರಸಭೆಗೆ ವಿರೋಧಿಸಿದ್ದರಿಂದ ಇದರಿಂದ ಗ್ರಾಮವಾಸಿಗಳಿಗೆ ತೊಂದರೆಯಾಗುತ್ತದೆ ಎಂದು ಅರಿವಾಗಿ ನಿರ್ಧಾರದಿಂದ ಹಿಂದೆ ಸರಿದೆ’ ಎಂದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಮದ್ದೂರಿನಲ್ಲಿ ಸಮಸ್ಯೆಗಳಾಗಿದ್ದಾಗಲೆಲ್ಲಾ ಇಲ್ಲಿನ ಶಾಸಕರು ವಿದೇಶದಲ್ಲಿರುತ್ತಾರೆ, ಇವರೇನು ವಿದೇಶಕ್ಕೆ ಶಾಸಕರಾ’ ಎಂದು ಪ್ರಶ್ನಿಸಿದರು.

‘ಚುನಾವಣೆ ವೇಳೆ ಮತ ಕೇಳಲು ಬಂದ ವೇಳೆ ಇದ್ದ ವಿನಯ ಈಗ ಏಕೆ ಇಲ್ಲ, ಗ್ರಾಮದವರ ಒಪ್ಪಿಗೆಯಿಲ್ಲದೇ ಏಕೆ ಬಲವಂತದಿಂದ ನಗರಸಭೆಗೆ ಸೇರಿಸುತ್ತೀರಿ’ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ಮಾತನಾಡಿದರು. ರೈತಪರ ಹೋರಾಟಗಾರ್ತಿ ಸುನಂದಾ ಜಯರಾಮ್‌, ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಮ್‌ ಹಾಜರಿದ್ದರು.

ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮ ಪಂಚಾಯತಿ ಗೇಟಿಗೆ ಹಾಕಿದ್ದ ಬೀಗವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ ಉಪಾಧ್ಯಕ್ಷ ಉಮೇಶ್ ಕಲ್ಲಿನಿಂದ ಹೊಡೆದರು

ಗೊರವನಹಳ್ಳಿಯಲ್ಲೂ ಪ್ರತಿಭಟನೆ 

ಗೊರವನಹಳ್ಳಿ ಗ್ರಾಮ ಪಂಚಾಯಿತಿ ಎದುರು ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೂ ತೆರಳಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಗ್ರಾಮ ಪಂಚಾಯಿತಿ ಗೇಟ್‌ಗೆ ಬೀಗ ಹಾಕಿದ್ದರಿಂದ ಪ್ರತಿಭಟನಕಾರರು ಆಕ್ರೋಶಗೊಂಡು ಅಧ್ಯಕ್ಷೆ ಗೌರಮ್ಮ ಹಾಗೂ ಉಪಾಧ್ಯಕ್ಷ ಉಮೇಶ್ ಬೀಗವನ್ನು ಕಲ್ಲಿನಿಂದ ಹೊಡೆದ ಪ್ರಸಂಗ (ಹೈಡ್ರಾಮ) ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.