ADVERTISEMENT

ಮದ್ದೂರು ಗಲಭೆ: ಶಾಂತಿ ಸಭೆಗೆ ಬಿಜೆಪಿ ಮುಖಂಡರ ಗೈರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 1:21 IST
Last Updated 10 ಸೆಪ್ಟೆಂಬರ್ 2025, 1:21 IST
<div class="paragraphs"><p>ಬಿಜೆಪಿ</p></div>

ಬಿಜೆಪಿ

   

ಮದ್ದೂರು (ಮಂಡ್ಯ ಜಿಲ್ಲೆ): ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅಧ್ಯಕ್ಷತೆಯಲ್ಲಿ ಪಟ್ಟಣದಲ್ಲಿ ಮಂಗಳವಾರ ಸಂಜೆ ಕರೆದಿದ್ದ ‘ಶಾಂತಿ ಸಭೆ’ಗೆ ಬಿಜೆಪಿ, ಹಿಂದುತ್ವ ಪರ ಮುಖಂಡರು ಗೈರಾದರು. 

ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯು ಮುಸ್ಲಿಂ ಮುಖಂಡರು, ಕಾಂಗ್ರೆಸ್‌ ಕಾರ್ಯಕರ್ತರು, ಅಧಿಕಾರಿಗಳಿಗೆ ಸೀಮಿತವಾಗಿತ್ತು. ಕಲ್ಲು ತೂರಾಟ ಖಂಡಿಸಿ ಪ್ರತಿಭಟಿಸಿದ್ದ ಯಾರೊಬ್ಬರೂ ಸಭೆಗೆ ಬರಲಿಲ್ಲ. 

ADVERTISEMENT

ಸಚಿವರು ಮಾತನಾಡಿ, ‘ಸಭೆಗೆ ಬಿಜೆಪಿ ಮುಖಂಡರು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಅವರು ಬಾರದೆ, ತಮಗೆ ಶಾಂತಿ ಬೇಕಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ನಮ್ಮ ಸರ್ಕಾರ ಬಂದ ಮೇಲೆ ಅವರು ಮೂರು ಸತ್ಯಶೋಧನಾ ಸಮಿತಿ ಮಾಡಿದ್ದಾರೆ’ ಎಂದರು. 

ವಿಧಾನ ಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಕುಮಾರ, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಪಾಲ್ಗೊಂಡಿದ್ದರು.

ಸಭೆಗೆ ಹೋಗಲ್ಲ: 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್‌ ಮಾಧ್ಯಮದವರೊಂದಿಗೆ ಮಾತನಾಡಿ, ‘ಮದ್ದೂರು ಘಟನೆಯಲ್ಲಿ ಒಂದೆರಡು ಕಲ್ಲೆಸೆಯಲಾಗಿದೆ ಎಂದು ಉಸ್ತುವಾರಿ ಸಚಿವರು ಹೇಳುತ್ತಾರೆ. ಗೃಹ ಸಚಿವ ಪರಮೇಶ್ವರ್‌ ಅವರು ‘ಸಣ್ಣ ಘಟನೆ’ ಅಂತಾರೆ. ಇಂಥವರ ನೇತೃತ್ವದಲ್ಲಿ ಸಭೆ ನಡೆಸಿದರೆ ಏನು ಪ್ರಯೋಜನ? ಹೀಗಾಗಿ ನಾವು ಸಭೆಗೆ ಹೋಗಿಲ್ಲ’ ಎಂದರು. 

‘ಪ್ರತಿಭಟಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಾರೆಂದು ಗೊತ್ತಿತ್ತು. ನ್ಯಾಯ ಕೇಳಲು ಹೋದವರಿಗೇ ಅನ್ಯಾಯ ಮಾಡಿದ್ದಾರೆ. 500 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಬಿಜೆಪಿ ಲೀಗಲ್‌ ಟೀಂ ಅವರ ಜೊತೆ ಇರುತ್ತದೆ’ ಎಂದು ಪ್ರತಿಕ್ರಿಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.