ಮದ್ದೂರು (ಮಂಡ್ಯ): ಗಣೇಶ ಮುರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಘಟನೆಯನ್ನು ಖಂಡಿಸಿ, ಮದ್ದೂರು ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆ ಬಿಜೆಪಿ, ಬಜರಂಗದಳ ಹಾಗೂ ಹಿಂದುತ್ವಪರ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಪಟ್ಟಣದ ಕೋಟೆ ಬೀದಿಯ ಉಗ್ರನರಸಿಂಹಸ್ವಾಮಿ ದೇವಸ್ಥಾನದ ಆವರಣದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಹಿಂದುತ್ವ ಪರ ಕಾರ್ಯಕರ್ತರು ಭಾಗವಹಿಸಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಮತ್ತು ಪೊಲೀಸರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಕೆಮ್ಮಣ್ಣು ನಾಲೆ ವೃತ್ತದ ಸಮೀಪದ ಮಸೀದಿ ಬಳಿ ಮೆರವಣಿಗೆ ಆಗಮಿಸುತ್ತಿದ್ದಂತೆ ಬಿಗುವಿನ ವಾತಾವರಣ ಏರ್ಪಟ್ಟಿತು. ಮಸೀದಿ ಮುಂಭಾಗ ಟೈರುಗಳಿಗೆ ಬೆಂಕಿ ಹಚ್ಚಿ, ಕಲ್ಲು ತೂರಾಟ ನಡೆಸಿದವರ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲಿಂದ ಕಾರ್ಯಕರ್ತರು ಕದಲದೇ ಇದ್ದಾಗ ಜಿಲ್ಲಾಧಿಕಾರಿ ಕುಮಾರ ಮತ್ತು ಎಸ್ಪಿ ಮಲ್ಲಿಕಾರ್ಜನು ಬಾಲದಂಡಿ ಅವರು ಪ್ರತಿಭಟನಾಕಾರರನ್ನು ಮುಂದೆ ಸಾಗುವಂತೆ ಮನವಿ ಮಾಡಿದರೂ, ಅರ್ಧಗಂಟೆ ಜಗ್ಗಲಿಲ್ಲ.
ನಂತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕೆಲವು ಕಿಡಿಗೇಡಿಗಳು ಮಸೀದಿಯತ್ತ ಕಲ್ಲು ತೂರಾಟ ನಡೆಸಿದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ, ಕಾರ್ಯಕರ್ತರನ್ನು ಚದುರಿಸಿದರು. ನಂತರ ಪರಿಸ್ಥಿತಿ ಸ್ವಲ್ಪ ನಿಯಂತ್ರಣಕ್ಕೆ ಬಂದಿತು.
ಪಟ್ಟಣದ ಪೇಟೆ ಬೀದಿಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆಯು ಐಬಿ ವೃತ್ತದಲ್ಲಿ ಜಮಾವಣೆಗೊಂಡಿತು. ಕೆಲಕಾಲ ಬೆಂಗಳೂರು–ಮೈಸೂರು ಹೆದ್ದಾರಿ ತಡೆ ನಡೆಸಿದರು. ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು. ಕೇಸರಿ ಧ್ವಜ ಹಿಡಿದು ಮತ್ತು ಕೇಸರಿ ಶಾಲುಗಳನ್ನು ಧರಿಸಿದ್ದ ಪ್ರತಿಭಟನಾಕಾರರ ದಂಡು ತಾಲ್ಲೂಕು ಕಚೇರಿಯ ಕಡೆ ಸಾಗಿತು. ಅಲ್ಲಿಯೂ ಕೆಲಕಾಲ ಹೆದ್ದಾರಿ ತಡೆ ನಡೆಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಡಿ.ಸಿ.ತಮ್ಮಣ್ಣ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಇಂದ್ರೇಶ್, ಬಿಜೆಪಿ ಮುಖಂಡರಾದ ಎಸ್.ಪಿ.ಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಮಾತನಾಡಿ, ರಾಜ್ಯ ಸರ್ಕಾರ ಮತ್ತು ಪೊಲೀಸರ ನಡೆಯನ್ನು ಖಂಡಿಸಿದರು. ಮಸೀದಿಗಳನ್ನು ಕೂಡಲೇ ಮುಚ್ಚಿಸಬೇಕು ಮತ್ತು ವಿನಾಕಾರಣ ಹಿಂದುತ್ವ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು, ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವ ಲಾಠಿ ಪ್ರಹಾರ ನಡೆಸಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.