ADVERTISEMENT

ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಎಲ್ಲರ ಹೊಣೆ

ಅರುವನಹಳ್ಳಿ ಜಾಗೃತಿ ಜಾಥಾ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಸಿಇಒ ನಂದಿನಿ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 3:28 IST
Last Updated 28 ಸೆಪ್ಟೆಂಬರ್ 2025, 3:28 IST
ಮದ್ದೂರು ತಾಲ್ಲೂಕಿನ ಅರುವನಹಳ್ಳಿಯಲ್ಲಿ ಮಂಡ್ಯ ಜಿ.ಪಂ ಹಾಗೂ ಮದ್ದೂರು ತಾಲ್ಲೂಕು ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಜಾಥಾವನ್ನು ಜಿ.ಪಂ. ಸಿಇಒ ನಂದಿನಿ ಉದ್ಘಾಟಿಸಿದರು. ತಾ.ಪಂ. ಇಒ ರಾಮಲಿಂಗಯ್ಯ, ಇತಿಹಾಸ ತಜ್ಞ ಕಲೀಮುಲ್ಲಾ, ಸಾಹಿತಿ ತೈಲೂರು ವೆಂಕಟಕೃಷ್ಣ ಇದ್ದಾರೆ
ಮದ್ದೂರು ತಾಲ್ಲೂಕಿನ ಅರುವನಹಳ್ಳಿಯಲ್ಲಿ ಮಂಡ್ಯ ಜಿ.ಪಂ ಹಾಗೂ ಮದ್ದೂರು ತಾಲ್ಲೂಕು ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಜಾಥಾವನ್ನು ಜಿ.ಪಂ. ಸಿಇಒ ನಂದಿನಿ ಉದ್ಘಾಟಿಸಿದರು. ತಾ.ಪಂ. ಇಒ ರಾಮಲಿಂಗಯ್ಯ, ಇತಿಹಾಸ ತಜ್ಞ ಕಲೀಮುಲ್ಲಾ, ಸಾಹಿತಿ ತೈಲೂರು ವೆಂಕಟಕೃಷ್ಣ ಇದ್ದಾರೆ   

ಮದ್ದೂರು: ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಇದರೊಂದಿಗೆ ಸ್ವಚ್ಛತೆಯ ಅರಿವಿಗಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಂಡ್ಯ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ತಿಳಿಸಿದರು.

ತಾಲ್ಲೂಕಿನ ಅರುವನಹಳ್ಳಿ ಗ್ರಾಮದಲ್ಲಿ ಮಂಡ್ಯ ಜಿ.ಪಂ ಹಾಗೂ ಮದ್ದೂರು ತಾಲ್ಲೂಕು ಪಂಚಾಯಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಪಾರಂಪರಿಕ ಸ್ಮಾರಕಗಳ ಸಂರಕ್ಷಣೆ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮಲ್ಲಿರುವ ಅಪರೂಪದ ವೀರಗಲ್ಲು, ಮಾಸ್ತಿಗಲ್ಲುಗಳನ್ನು ರಕ್ಷಿಸುವ ಜಾಗೃತಿ ಮೂಡಿಸುವುದೂ ಈ ಪಾರಂಪರಿಕ ನಡಿಗೆಯ ಉದ್ದೇಶ. ಇದರಿಂದ ಪಾರಂಪರಿಕ ಸ್ಮಾರಕಗಳ ಮೌಲ್ಯವೂ ನಮಗೆ ತಿಳಿಯುತ್ತದೆ. ಇವು ಬೆಲೆಯನ್ನೇ ಕಟ್ಟಲಾಗದ ಸ್ವತ್ತು. ಇವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ, ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಇಂತಹವುಗಳನ್ನು ಸಂರಕ್ಷಿಸಿಡಲು ಸರಿಯಾದ ಜಾಗವಿಲ್ಲದಿದ್ದರೆ ಗ್ರಾ.ಪಂ ಆವರಣದಲ್ಲಿ ಸಂರಕ್ಷಣೆ ಮಾಡಬಹುದು. ಅದಕ್ಕೆ ಅಗತ್ಯ ಅನುದಾನ ಬಳಸಬಹುದು ಎಂದರು.

ADVERTISEMENT

ಇತಿಹಾಸ ತಜ್ಞ ಕಲೀಮುಲ್ಲಾ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೀರ್ತಿ ರಾಜರು ಇಲ್ಲಿಗೆ ಬಂದು 90 ವರ್ಷಗಳ ಕಾಲ ನೆಲಸಿದ್ದರು, ಇಲ್ಲಿ ಇರುವ ವೀರಗಲ್ಲುಗಳು ಎಲ್ಲೂ ಇಲ್ಲ, ಅಷ್ಟು ವಿಶೇಷತೆಗಳಿಂದ ಕೂಡಿವೆ. ಹುಲಿಯ ಜೊತೆ ಹೋರಾಡಿದ ವೀರರು ಇಲ್ಲಿ ಇದ್ದರು ಎಂಬುದಕ್ಕೆ ಇಲ್ಲಿ ಸಾಕ್ಷಿಯಿದೆ. ಮಹಾಸತಿ ಕಲ್ಲು ಇದೆ. ಅದನ್ನು ಮಾಸ್ತಿಗಲ್ಲು ಎನ್ನುತ್ತಾರೆ ಎಂದರು.

ಸಾಹಿತಿ ತೈಲೂರು ವೆಂಕಟಕೃಷ್ಣ ಮಾತನಾಡಿ, ಈ ಗ್ರಾಮದಲ್ಲಿರುವ ವೀರಗಲ್ಲುಗಳಿಗೆ 600 ವರ್ಷಗಳಾಗಿವೆ. ಈ ಭಾಗದಲ್ಲಿ ಹಿಂದೆ ಬುಕ್ಕರಾಜ ಹಾಗೂ ಕೀರ್ತಿ ರಾಜರು ಸುಮಾರು ಕೆರೆಗಳನ್ನು ಕಟ್ಟಿಸಿದ್ದರು ಎಂಬುದಕ್ಕೆ ನಿದರ್ಶನವಿದೆ ಎಂದರು.

ಕೂಳಗೆರೆ ಗ್ರಾ.ಪಂ. ಅಧ್ಯಕ್ಷೆ ರೇಖಾ , ತಾ.ಪಂ. ಇಒ ರಾಮಲಿಂಗಯ್ಯ, ಕೆ.ಆರ್. ಪೇಟೆ ತಾ.ಪಂ. ಇಒ ಹೇಮಾ, ಮುಖಂಡರಾದ ಶ್ರೀನಿವಾಸ್ ಗೌಡ, ಪಿಡಿಒ ಸುಷ್ಮಾ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.