ಮದ್ದೂರು: ಮುಟ್ಟಿನ ಕಪ್ ಬಳಸಲು ಮಹಿಳೆಯರು ಮುಜುಗರ ಪಡಬಾರದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಮಲಿಂಗಯ್ಯ ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ಹಾಗೂ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮುಟ್ಟಿನ ಕಪ್ ಬಳಕೆ ಕುರಿತ ತರಬೇತುದಾರರ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮುಂದುವರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಬದಲಾವಣೆಗಳಾಗುತ್ತಿವೆ. ಈ ಹಿಂದೆ ಮುಟ್ಟಿನ ವೇಳೆ ಪ್ಯಾಡ್ ಉಪಯೋಗಿಸಲಾಗುತ್ತಿತ್ತು. ಇದರಿಂದ ಹಣ, ಸಮಯ ಎರಡೂ ವ್ಯರ್ಥ. ಮಹಿಳೆಯರಿಗೆ ಮುಟ್ಟಿನ ಸಂದರ್ಭ ಸ್ವಚ್ಛತೆ ಮತ್ತು ನೈರ್ಮಲ್ಯದ ಕೊರತೆಯೂ ಕಾಡುತ್ತಿತ್ತು. ಮುಟ್ಟಿನ ವಿಷಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಆಗುತ್ತಿವೆ. ಸಮಾಜದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಮಹಿಳೆಯರು ಮೊದಲು ಮುಟ್ಟಿನ ಕಪ್ ಬಳಸಿ ಇತರೆ ಮಹಿಳೆಯರಿಗೆ ಮಾದರಿಯಾಗಬೇಕು ಎಂದರು.
ಮದ್ದೂರು ತಾಲ್ಲೂಕು ಪಂಚಾಯಿತಿಯಿಂದ 15 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳ ಮೂಲಕ ಮುಟ್ಟಿನ ಕಪ್ ವಿತರಿಸಲಾಗಿದೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕಿಯರು, ಪದವಿ ಕಾಲೇಜಿನ ವಿದ್ಯಾರ್ಥಿಗಳು, ವಿವಿಧ ಇಲಾಖೆಗಳ ಮಹಿಳಾ ಸಿಬ್ಬಂದಿ, ಸಂಜೀವಿನಿ ಕಾರ್ಯಕರ್ತೆಯರು ಸೇರಿ 4 ಸಾವಿರಕ್ಕೂ ಅಧಿಕ ಮುಂಚೂಣಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಉಚಿತವಾಗಿ ಮುಟ್ಟಿನ ಕಪ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕೆ ವಿವಿಧ ಕಂಪನಿಗಳ ಸಿಎಸ್ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ ಎಂದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಆಶಾಲತಾ ಮಾತನಾಡಿ, ಮುಟ್ಟಿನ ಕಪ್ ಬಳಕೆ ಕುರಿತು ಅರಿವು ಪಡೆಯುವುದು ಬಹಳ ಮುಖ್ಯ. ಮಹಿಳೆಯರು ಇದರ ಕುರಿತು ಯಾವುದೇ ಪೂರ್ವಗ್ರಹಪೀಡಿತರಾಗದೇ ನಿಸ್ಸಂಕೋಚವಾಗಿ ಬಳಸಲು ಮುಂದಡಿ ಇಡಬೇಕು ಎಂದರು.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಶೀಲಾ ಮುಟ್ಟಿನ ಕಪ್ ಬಳಕೆ ಕುರಿತು ತರಬೇತಿ ನೀಡಿದರು.
ತಾಲ್ಲೂಕು ಯೋಜನಾಧಿಕಾರಿ ಸುರೇಶ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರವಿಶಂಕರ್, ಆರೋಗ್ಯ ಇಲಾಖೆ ಸಿಬ್ಬಂದಿ ಮರಿಸ್ವಾಮಿ, ತಮ್ಮೇಗೌಡ, ಮಣಿ, ಶೀಲಾ ಇತರರು ಹಾಜರಿದ್ದರು.
ಮುಟ್ಟಿನ ಕಪ್ ಉಚಿತ ವಿತರಣೆಗೆ ಸಿದ್ಧತೆ 4 ಸಾವಿರಕ್ಕೂ ಅಧಿಕ ಮಹಿಳೆಯರಿಗೆ ವಿತರಿಸಲು ಕ್ರಮ | ಕಾರ್ಯಕ್ರಮ ನಿರ್ವಹಣೆಗೆ ಕಾರ್ಯಪಡೆ ರಚನೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.