ಮಂಡ್ಯ: ‘ರೈತರ ಬಾಳು ಹಸನು ಮಾಡುವ ಉದ್ದೇಶದಿಂದಲೇ ನೇರನುಡಿಯಾಡುತ್ತಿದ್ದ ಜಿ.ಮಾದೇಗೌಡರು ಬಹಳ ಮುಂಗೋಪಿಯಾಗಿದ್ದರು. ಆದರೆ ಕೋಪವಿದ್ದರೂ ದ್ವೇಷ ಇಟ್ಟುಕೊಂಡಿರದ ಅಪ್ಪಟ ಗಾಂಧಿವಾದಿ’ ಎಂದು ಚಿಂತಕ ಪ್ರೊ.ನರಹಳ್ಳಿ ಬಾಲಸುಬ್ರಹ್ಮಣ್ಯ ಬಣ್ಣಿಸಿದರು.
ನಗರದ ಗಾಂಧಿ ಭವನದಲ್ಲಿ ಡಾ.ಜಿ. ಮಾದೇಗೌಡ ಪ್ರತಿಷ್ಠಾನ, ಭಾರತೀ ಎಜುಕೇಷನ್ ಟ್ರಸ್ಟ್, ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಗುರುವಾರ ನಡೆದ 25ನೇ ವರ್ಷದ ರಾಜ್ಯ ಮಟ್ಟದ ಡಾ.ಜಿ.ಮಾದೇಗೌಡ ಸಮಾಜಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅನೇಕ ರಾಜಕೀಯ ನಾಯಕರು ಅಕ್ಷರ ಶತ್ರುಗಳಾಗಿದ್ದಾರೆ. ಪುಸ್ತಕಗಳನ್ನು ಕೊಟ್ಟಾಗ ಶಾಲಾ ಕಾಲೇಜುಗಳಲ್ಲಿಯೇ ಓದಿಲ್ಲ. ಈಗ ಏಕೆ ಓದಬೇಕು ಎನ್ನುವ ಮನೋಭಾವ ತಾಳಿರುವ ಇಂತಹ ರಾಜಕಾರಣಿಗಳಿಂದ ನಾವು ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವೇ?’ ಎಂದು ಬೇಸರ ವ್ಯಕ್ತಪಡಿಸಿದರು.
‘ಕಾವೇರಿ ಹೋರಾಟ, ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆ ಉಳಿವಿನ ಹೋರಾಟಗಳು ಸೇರಿದಂತೆ ಜಿಲ್ಲೆಯಲ್ಲಿ ರೈತರಿಗೆ ಅನ್ಯಾಯವಾದಾಗ ಧ್ವನಿ ಎತ್ತುತ್ತಿದ್ದ ಏಕೈಕ ವ್ಯಕ್ತಿ ಮಾದೇಗೌಡರು. ಇವರು ಶಿಕ್ಷಣ, ಧಾರ್ಮಿಕ, ಆರೋಗ್ಯ, ಉದ್ಯೋಗ ಎಂಬ ನಾಲ್ಕು ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು, ಹಳ್ಳಿಗಳ ಅಭಿವೃದ್ಧಿಯ ಕನಸು ಕಂಡಿದ್ದರು’ ಎಂದು ಪ್ರತಿಪಾದಿಸಿದರು.
ಆತ್ಮಲಿಂಗಕ್ಷೇತ್ರವನ್ನು ಪ್ರವಾಸಿ ಕೇಂದ್ರವಾಗಿ ಮಾಡಿದ್ದಾರೆ. ಶಿಕ್ಷಣ ಕಾಶಿಯನ್ನೇ ಭಾರತೀನಗರದಲ್ಲಿ ನಿರ್ಮಿಸಿದ್ದಾರೆ. ಉದ್ಯೋಗ ಸೃಷ್ಟಿಯಲ್ಲಿಯೂ ಇವರ ಪಾತ್ರ ದೊಡ್ಡದಿದೆ. ಗೋವಿಂದೇಗೌಡ ಅವರನ್ನು ‘ಬಯಲುಸೀಮೆ ಗಾಂಧಿ’ ಎನ್ನುತ್ತಾರೆ. ಆದರೆ ಕರ್ನಾಟಕ ಗಾಂಧಿ ಎಂದರೆ ಅದು ನಮ್ಮ ಜಿ.ಮಾದೇಗೌಡರೆಂದರೆ ತಪ್ಪಿಲ್ಲ. ಇವರ ಹೆಸರಿನಲ್ಲಿ ಪ್ರದಾನ ಮಾಡುತ್ತಿರುವ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿ ಅದರ ಮಹತ್ವ ಉಳಿಸಿಕೊಂಡಿದೆ’ ಎಂದರು.
ಶಾಸಕ ಪಿ.ರವಿಕುಮಾರ್ ಮಾತನಾಡಿ, ‘ರೈತರ ಮೇಲಿನ ಪ್ರಕರಣಗಳನ್ನು ಸರ್ಕಾರ ವಾಪಸ್ ಪಡೆದ ಮೇಲೆ ನಾನು ಸಹ ಮುಕ್ತನಾಗಿದ್ದೇನೆ. ಇವರ ಪುತ್ರ ಮಧು ಜಿ.ಮಾದೇಗೌಡ ಅವರು ಕೂಡ ಗಾಂಧಿ ಭವನವನ್ನು ನವೀಕರಣಗೊಳಿಸುವ ಮೂಲಕ ಮತ್ತಷ್ಟು ಭವನದ ವೈಭವ ಹೆಚ್ಚಿದೆ. ಇವರ ಉತ್ತಮ ಕೆಲಸಗಳಿಗೆ ನನ್ನ ಬೆಂಬಲ ಇರುತ್ತದೆ’ ಎಂದು ಭರವಸೆ ನೀಡಿದರು.
ಪ್ರಶಸ್ತಿ ಪ್ರದಾನ:
ಸಮಾಜ ಸೇವಾ ಪ್ರಶಸ್ತಿಯನ್ನು ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಅಧ್ಯಕ್ಷೆ ಸರೋಜಮ್ಮ ಎಂ.ಚಂದ್ರಶೇಖರ್ ಹಾಗೂ ಸಾವಯವ ಕೃಷಿಕ ಪ್ರಶಸ್ತಿಯನ್ನು ಕುಣಿಗಲ್ ತಾಲ್ಲೂಕಿನ ದೊಡ್ಡಹುಸೂರಿನ ಗಾಂಧೀಜಿ ಸಹಜ ಬೇಸಾಯ ಆಶ್ರಮ ಸಂಸ್ಥಾಪಕ ಎಚ್. ಮಂಜುನಾಥ್ ಅವರಿಗೆ ₹25 ಸಾವಿರ ಮತ್ತು ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಭಾರತೀ ಎಜುಕೇಷನ್ ಟ್ರಸ್ಟ್‌ನ ನಂಜೇಗೌಡ, ಪ್ರಾಂಶುಪಾಲ ಮಹದೇವಸ್ವಾಮಿ, ಮುಖಂಡರ ಸಿ.ಎಂ.ಉಮೇಶ್ ಭಾಗವಹಿಸಿದ್ದರು.
‘ಮಾದೇಗೌಡರು ಮಂಡ್ಯದ ಗಾಂಧಿ’
ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ ‘ಮಂಡ್ಯ ಗಾಂಧಿ ಎನ್ನುವ ಮಾತು ಜಿ.ಮಾದೇಗೌಡರಿಗೆ ಒಗ್ಗುತ್ತದೆ. ಕಾವೇರಿ ಹೋರಾಟವೇ ಇವರಿಗೆ ಪ್ರೇರಣೆಯಾಗಿದ್ದು ಇನ್ನೂ ಮಂಡ್ಯ ಜಿಲ್ಲೆಯಲ್ಲಿ ಹೋರಾಟ ಜೀವಂತವಾಗಿದ್ದರೆ ಮಾದೇಗೌಡರು ಹಾಕಿಕೊಟ್ಟ ಅಡಿಪಾಯವಾಗಿದೆ. ಇಂತಹ ಹಲವು ಮಹನೀಯರ ಹೊರಾಟದ ಕಿಚ್ಚು ಇರಬಹುದು. ಇದರಲ್ಲಿ ಮಾದೇಗೌಡರದ್ದು ವಿಶೇಷ ಎನಿಸುತ್ತದೆ. ರಾಜಕಾರಣಿಗಳು ಹಣ ಮಾಡುವುದರಲ್ಲೇ ನಿರತರಾಗಿರುತ್ತಾರೆ. ನಮ್ಮ ಮಾದೇಗೌಡರು ಇದಕ್ಕೆ ವಿರುದ್ಧವಾಗಿದ್ದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.