ADVERTISEMENT

ಮಂಡ್ಯ | ಕಿರುತೆರೆ ನಟಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 14:31 IST
Last Updated 25 ಜೂನ್ 2022, 14:31 IST
ಗಂಡು ಮಗುವಿನ ಜೊತೆ ನಟಿ ಪೂರ್ಣಿಮಾ
ಗಂಡು ಮಗುವಿನ ಜೊತೆ ನಟಿ ಪೂರ್ಣಿಮಾ   

ಕೆರಗೋಡು: ಪ್ಲೆಸೆಂಟಾ ಡೌನ್‌ ಸಮಸ್ಯೆ ಹೊಂದಿದ್ದ ಕಿರುತೆರೆ ನಟಿ ಪೂರ್ಣಿಮಾ ಅವರಿಗೆ ಮಂಡ್ಯ ತಾಲ್ಲೂಕು ಕೀಲಾರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಈಚೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ. ಪೂರ್ಣಿಮಾ ಗಂಡುಮಗುವಿಗೆ ಜನ್ಮನೀಡಿದ್ದು ತಾಯಿ, ಮಗು ಆರೋಗ್ಯದಿಂದ ಇದ್ದಾರೆ.

ಮದ್ದೂರು ಮೂಲದ ಪೂರ್ಣಿಮಾ ಅವರು ಬೆಂಗಳೂರಿನಲ್ಲಿ ಪತಿ ಬೆಂಕೇಶ್‌ ಜೊತೆ ವಾಸವಿದ್ದರು. ಗರ್ಭಿಣಿಯಾದ ನಂತರ ಅವರು ಖಾಸಗಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು, ಪ್ಲೆಸೆಂಟಾ ಡೌನ್‌ ಸಮಸ್ಯೆ ಪತ್ತೆಯಾಗಿತ್ತು. ಹೆರಿಗೆ ಕಷ್ಟವಾಗಲಿದೆ ಎಂದು ಹಲವು ಪ್ರತಿಷ್ಠಿತ ಆಸ್ಪತ್ರೆಗಳ ವೈದ್ಯರು ತಿಳಿಸಿದ್ದರು.

ಈಚಗೆರೆ ಗ್ರಾಮದ ಸುಶೀಲಮ್ಮ ಎಂಬುವವರ ಮೂಲಕ ಕೀಲಾರ ಗ್ರಾಮದ ಸರ್ಕಾರಿ ಆಸ್ಪತ್ರೆ ವೈದ್ಯರು ಇಂತಹ ಸಮಸ್ಯೆಯನ್ನು ಚೆನ್ನಾಗಿ ನಿರ್ವಹಿಸುತ್ತಾರೆ ಎಂಬ ವಿಚಾರ ತಿಳಿದಿತ್ತು. ತಕ್ಷಣ ಅವರು ಕೀಲಾರ ಗ್ರಾಮದ ಸಮುದಾಯ ಆಸ್ಪತ್ರೆಯ ವೈದ್ಯ ಡಾ.ಎಚ್.ಅರ್ಜುನ್‌ಕುಮಾರ್ ಬಳಿ ಬಂದರು. ಪರಿಶೀಲಿಸಿದ ವೈದ್ಯರು ಯಾವುದೇ ಸಮಸ್ಯೆ ಇಲ್ಲದೇ ಹೆರಿಗೆ ಆಗಲಿದೆ ಎಂದು ಭರವಸೆ ನೀಡಿದ್ದರು. ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ ಅವರು ಜೂನ್‌ 13ರಂದು ಗಂಡುಮಗುವಿಗೆ ಜನ್ಮ ನೀಡಿದರು.

ADVERTISEMENT

‘ಸವಾಲಾಗಿದ್ದ ಸಮಸ್ಯೆಯನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಸುಲಭವಾಗಿ ಪರಿಹರಿಸಿದ್ದಾರೆ. ಯಾವುದೇ ಸಮಸ್ಯೆ ಇಲ್ಲದೇ ಸಿಜೇರಿಯನ್‌ ಮೂಲಕ ಹೆರಿಗೆಯಾಯಿತು. ಎಷ್ಟೇ ದೊಡ್ಡ ಆಸ್ಪತ್ರೆಗಳು ಇದ್ದರೂ ಸರ್ಕಾರಿ ಆಸ್ಪತ್ರೆ ವೈದ್ಯರ ಸೇವೆ ಮರೆಯಲು ಸಾಧ್ಯವಿಲ್ಲ’ ಎಂದು ಪೂರ್ಣಿಮಾ ತಿಳಿಸಿದರು.

2011ರಲ್ಲಿ ಖಾಸಗಿ ವಾಹಿನಿಯಲ್ಲಿ ಬಂದ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ರಿಯಾಲಿಟಿ ಶೋನಲ್ಲಿ ಪೂರ್ಣಮಾ ಭಾಗವಹಿಸಿದ್ದರು. ನಂತರ ತಂಗಾಳಿ, ಬದುಕು, ಅಕ್ಕ, ಮಗಳು ಜಾನಕಿ ದಾರಾವಾಹಿ ಸೇರಿ ಹಲವು ಸಿನಿಮಾಗಳಲ್ಲೂ ಆಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.