ADVERTISEMENT

ಮಕ್ಕಳ ಗ್ರಾಮಸಭೆ: ಮಂಡ್ಯಕ್ಕೆ ಅಗ್ರಸ್ಥಾನ

17,597 ಮಕ್ಕಳು ನೋಂದಣಿ: ಚಿಣ್ಣರ ಸೃಜನಶೀಲತೆಗೆ ನೀರೆರೆದ ‘ಬೇಸಿಗೆ ಶಿಬಿರ‘

ಸಿದ್ದು ಆರ್.ಜಿ.ಹಳ್ಳಿ
Published 18 ಜೂನ್ 2025, 4:18 IST
Last Updated 18 ಜೂನ್ 2025, 4:18 IST
ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ‘ಬೇಸಿಗೆ ಶಿಬಿರ’ದಲ್ಲಿ ಪಾಲ್ಗೊಂಡಿದ್ದ ಮಕ್ಕಳು  –ಪ್ರಜಾವಾಣಿ ಚಿತ್ರ  
ಮಂಡ್ಯ ಜಿಲ್ಲಾ ಪಂಚಾಯಿತಿ ವತಿಯಿಂದ ನಡೆದ ‘ಬೇಸಿಗೆ ಶಿಬಿರ’ದಲ್ಲಿ ಪಾಲ್ಗೊಂಡಿದ್ದ ಮಕ್ಕಳು  –ಪ್ರಜಾವಾಣಿ ಚಿತ್ರ     

ಮಂಡ್ಯ: ಮಕ್ಕಳ ಸಮಸ್ಯೆಗಳನ್ನು ಅವರಿಂದಲೇ ತಿಳಿದುಕೊಂಡು, ಪರಿಹಾರ ಕಲ್ಪಿಸಲು ಸೂಕ್ತ ವೇದಿಕೆ ಒದಗಿಸುವ ‘ಮಕ್ಕಳ ಗ್ರಾಮ ಸಭೆ’ ಆಯೋಜನೆಯಲ್ಲಿ ಮಂಡ್ಯ ಜಿಲ್ಲಾ ಪಂಚಾಯಿತಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.

ಮಂಡ್ಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 233 ಗ್ರಾಮ ಪಂಚಾಯಿತಿಗಳ ಪೈಕಿ 223 ಗ್ರಾಮ ಪಂಚಾಯಿತಿಗಳಲ್ಲಿ ಮೇ ತಿಂಗಳಲ್ಲಿ ‘ಮಕ್ಕಳ ಗ್ರಾಮಸಭೆ’ ಆಯೋಜಿಸಿ ಶೇ 95.71ರಷ್ಟು ಪ್ರಗತಿ ಸಾಧಿಸುವ ಮೂಲಕ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ.

ಮಕ್ಕಳ ಹಕ್ಕುಗಳ ರಕ್ಷಣೆ, ಸುರಕ್ಷತೆ, ಪೌಷ್ಟಿಕ ಆಹಾರ, ರೋಗ ನಿರೋಧಕ ಚುಚ್ಚುಮದ್ದು, ಶಾಲಾ ದಾಖಲಾತಿ, ಶಿಶು ಮರಣ ಪ್ರಮಾಣ ತಗ್ಗಿಸುವಿಕೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಪಡಿತರ ವಿತರಣೆ ಮುಂತಾದ ವಿಷಯಗಳ ಕುರಿತು ಮಕ್ಕಳೊಂದಿಗೆ ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಚರ್ಚೆ ನಡೆಸಿದ್ದಾರೆ.   

ADVERTISEMENT

‘ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಸಾಮಾಜಿಕ ಪಿಡುಗುಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಗಿದೆ. ಸರ್ಕಾರಿ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗಿದೆ. ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳನ್ನು ಅವರಿಂದಲೇ ಕೇಳಿ, ಚರ್ಚಿಸಿ, ನಂತರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ’ ಎನ್ನುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.

17,597 ಮಕ್ಕಳು ನೋಂದಣಿ:

ಬೇಸಿಗೆ ರಜೆಯ ಸಮಯವನ್ನು ಅರ್ಥಪೂರ್ಣವಾಗಿಸಲು ಮಂಡ್ಯ ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲೂ ಮೇ 2ರಿಂದ 26ರವರೆಗೆ ಅರಿವು ಕೇಂದ್ರಗಳ ಮೂಲಕ ‘ಬೇಸಿಗೆ ಶಿಬಿರ’ ಆಯೋಜಿಸಲಾಗಿತ್ತು. ಜಿಲ್ಲೆಯಲ್ಲಿ ಬರೋಬ್ಬರಿ 17,597 ಮಕ್ಕಳು ನೋಂದಣಿ ಮಾಡಿಕೊಂಡು ಶಿಬಿರದ ಪ್ರಯೋಜನ ಪಡೆದರು. 25 ದಿನಗಳ ಶಿಬಿರದಲ್ಲಿ ಒಂದು ದಿನವನ್ನು ‘ಮಕ್ಕಳ ಗ್ರಾಮಸಭೆ’ಗೆ ಮೀಸಲಿಡಲಾಗಿತ್ತು.  

‘ಶಿಬಿರದಲ್ಲಿ ಮಕ್ಕಳಿಂದ ಪತ್ರಿಕೆಗಳನ್ನು ಓದಿಸುವುದು, ಪ್ರಾಚೀನ ಕಾಲದ ಶಾಸನ, ವೀರಗಲ್ಲುಗಳ ಬಗ್ಗೆ ಮಾಹಿತಿ, ಪರಿಸರ ಸ್ನೇಹಿ ಕಾಗದ ಬ್ಯಾಗ್‌ ತಯಾರಿಕೆ, ಗುಡ್‌ ಟಚ್‌– ಬ್ಯಾಡ್‌ ಟಚ್‌ ಬಗ್ಗೆ ತಿಳಿವಳಿಕೆ, ಗ್ರಾಮೀಣ ಆಟಗಳನ್ನು ಆಡಿಸುವುದು ಸೇರಿದಂತೆ 26 ವೈವಿಧ್ಯಮಯ ಚಟುವಟಿಕೆಗಳನ್ನು ಮಾಡಿಸಿದ್ದೇವೆ. ಬ್ಯಾಂಕ್‌, ಪೊಲೀಸ್‌ ಠಾಣೆ, ಅಂಚೆ ಕಚೇರಿಗಳಿಗೆ ಮಕ್ಕಳನ್ನು ಕರೆದೊಯ್ದು ಅರಿವು ಮೂಡಿಸಿದ್ದೇವೆ. ಭಾಗವಹಿಸಿದ ಪ್ರತಿಯೊಬ್ಬ ಮಕ್ಕಳಿಗೂ ‘ಅಭಿನಂದನಾ ಪತ್ರ’ ನೀಡಿದ್ದೇವೆ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ (ಅಭಿವೃದ್ಧಿ) ಲಕ್ಷ್ಮಿ ಪಿ. ತಿಳಿಸಿದರು.

ಕೆ.ಆರ್‌.ನಂದಿನಿ

223 ಗ್ರಾ.ಪಂ.ಗಳಲ್ಲಿ ‘ಮಕ್ಕಳ ಗ್ರಾಮಸಭೆ’ ಆಯೋಜನೆ ಪರಿಸರ ಸ್ನೇಹಿ ಬ್ಯಾಗ್‌ ತಯಾರಿಸಿದ ಮಕ್ಕಳು  ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಬಗ್ಗೆ ಜಾಗೃತಿ

ಗ್ರಾಮ ಪಂಚಾಯಿತಿಗಳಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ‘ಮಕ್ಕಳ ಗ್ರಾಮಸಭೆ‘ಗೆ ವಿಶೇಷ ಆದ್ಯತೆ ನೀಡಿದ್ದೆವು. ಪಂಚಾಯಿತಿಗಳನ್ನು ‘ಮಕ್ಕಳ ಸ್ನೇಹಿ’ಯನ್ನಾಗಿಸುವುದು ಮುಖ್ಯ ಗುರಿಯಾಗಿದೆ
– ಕೆ.ಆರ್‌.ನಂದಿನಿ ಸಿಇಒ ಮಂಡ್ಯ ಜಿಲ್ಲಾ ಪಂಚಾಯಿತಿ

ಮಕ್ಕಳ ಗ್ರಾಮಸಭೆ: ತಾಲ್ಲೂಕುವಾರು ವಿವರ  ತಾಲ್ಲೂಕು;ಒಟ್ಟು ಗ್ರಾ.ಪಂ;ಗ್ರಾಮಸಭೆ;ಶೇಕಡಾವಾರು ಕೃಷ್ಣರಾಜಪೇಟೆ;34;34;100 ಮದ್ದೂರು;42;39;92 ಮಳವಳ್ಳಿ;39;39;100 ಮಂಡ್ಯ;46;45;97 ನಾಗಮಂಗಲ;27;24;88 ಪಾಂಡವಪುರ;24;23;95 ಶ್ರೀರಂಗಪಟ್ಟಣ;21;19;90 ಒಟ್ಟು;233;223;95

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.