ಪ್ರಜಾವಾಣಿ ವಾರ್ತೆ
ಮಳವಳ್ಳಿ: ಮದ್ದೂರಿನಲ್ಲಿ ಗಣೇಶಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ ಖಂಡಿಸಿ ಬಿಜೆಪಿ, ಜೆಡಿಎಸ್ ಹಾಗೂ ಹಿಂದುತ್ವಪರ ಸಂಘಟಗಳು ಗುರುವಾರ ಕರೆ ನೀಡಿದ್ದ ಮಳವಳ್ಳಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಪಟ್ಟಣದ ಪ್ರಮುಖ ವಾಣಿಜ್ಯ ಕೇಂದ್ರ ಪೇಟೆ ಬೀದಿ, ಮೈಸೂರು ರಸ್ತೆ, ಕೊಳ್ಳೇಗಾಲ ರಸ್ತೆ, ಮದ್ದೂರು ರಸ್ತೆ ಸೇರಿದಂತೆ ಹಲವೆಡೆ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದರು. ಆದರೆ ಶಾಲಾ, ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದರೆ, ಸಾರಿಗೆ ಸಂಚಾರ ಸುಗಮವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ ಮೆರವಣಿಗೆ ಹೊರಟ ಜೆಡಿಎಸ್, ಬಿಜೆಪಿ ಮತ್ತು ಹಿಂದುತ್ವಪರ ಸಂಘಟಗಳ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಅನಂತ್ ರಾಂ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ಅನ್ನದಾನಿ ಮಾತನಾಡಿ, ಎಲ್ಲ ಧರ್ಮಗಳನ್ನು ಸಮನಾಗಿ ಕಾಣಬೇಕಾದ ಕಾಂಗ್ರೆಸ್ ಸರ್ಕಾರ ಒಂದು ಧರ್ಮವನ್ನು ಒಲೈಸಲು ಮತ್ತೊಂದು ಧರ್ಮವನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಸರಿಯಲ್ಲ. ರಾಜಕೀಯ ಮತಬ್ಯಾಂಕ್‌ಗಾಗಿ ನೀಚತನ ಪ್ರದರ್ಶನವನ್ನು ಕಾಂಗ್ರೆಸ್ ಬಿಡಬೇಕು. ಎಲ್ಲರೂ ಮತ ಹಾಕಿದ್ದಾರೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅರಿತು ಸರ್ವಜನ ಶಾಂತಿಯ ತೋಟದ ಜನರನ್ನು ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿಂದೂ ಸಮುದಾಯ ಮುಸ್ಲಿಮರ ಕಾರ್ಯಕ್ರಮಗಳಿಗೆ ತೊಂದರೆ ನೀಡದೇ ಗೌರವಿಸುತ್ತದೆ. ಆದರೆ ಮುಸ್ಲಿಂರು ಏಕೆ ಹಿಂದೂಗಳನ್ನು ದ್ವೇಷದಿಂದ ಕಾಣುತ್ತಾರೆ ತಿಳಿಯುತ್ತಿಲ್ಲ. ಇಲ್ಲಿನ ಶಾಸಕರಿಗೆ ಮದ್ದೂರಿನ ಜನರ ನೋವು ಕಾಣುತ್ತಿಲ್ಲ, ಜಲಪಾತೋತ್ಸವ ಹೆಸರಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಜಲಪಾತೋತ್ಸವ ಆಚರಣೆಗೆ ನಮ್ಮ ವಿರೋಧವಿಲ್ಲ, ಆದರೆ ಮದ್ದೂರು ಘಟನೆಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಬೇಕಿತ್ತು. ಅಲ್ಲದೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿ ದಾಂದಲೆ ನಡೆಸಿರುವ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದ್ದರೂ ಬಂಧಿಸದಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರೈತ ಮೋರ್ಚಾದ ರಾಜ್ಯ ಕಾರ್ಯದರ್ಶಿ ಎಚ್.ಆರ್.ಅಶೋಕ್ ಕುಮಾರ್ ಮಾತನಾಡಿ, ಹಿಂದೂ ಕಾರ್ಯಕರ್ತರ ಮೇಲೆ ಕಲ್ಲು ಎಸೆದಿರುವುದು ಖಂಡನೀಯ. ಈದ್ ಮಿಲಾದ್ ಸಂದರ್ಭದಲ್ಲಿ ಮೆರವಣಿಗೆ ಹಾಗೂ ನೃತ್ಯಕ್ಕೆ ಅವಕಾಶ ನೀಡುವ ಪೊಲೀಸ್ ಇಲಾಖೆ ಗಣೇಶ ವಿಜರ್ಸನೆ ಮೆರೆವಣಿಗೆಗೆ ನಿಯಮಗಳನ್ನು ರೂಪಿಸಿರುವುದು ಸರಿಯಲ್ಲ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ.ಮಾತನಾಡಿ, ಮದ್ದೂರಿನಲ್ಲಿ ಆಶಾಂತಿ ಉಂಟು ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷಗೆ ನೀಡುವುದರ ಜೊತೆಗೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ಸಮನಾಗಿ ಕಾಣಬೇಕಿದೆ
ನಿಸಾರ್ ಅಹಮ್ಮದ್, ಅಬ್ದಲ್ ಕಲಾಂ, ಮಿರ್ಜಾ ಇಸ್ಮಾಯಿಲ್, ಟಿಪ್ಪು ಸುಲ್ತಾನ್ ಅವರನ್ನು ನಾವು ಗೌವರಿಸುತ್ತೇವೆ. ಮೈಸೂರು ಪ್ರಾಂತ್ಯವನ್ನು ಹೈದರಾಲಿ, ಟಿಪ್ಪು ಸುಲ್ತಾನ್ ಆಳ್ವಿಕೆಯನ್ನು ಅಂದು ಹಿಂದೂಗಳು ವಿರೋಧ ಮಾಡಲಿಲ್ಲ. ಟಿಪ್ಪು ಸುಲ್ತಾನ್ ಅವರು ಹಲವಾರು ದೇವಸ್ಥಾನಗಳು ಹಾಗೂ ಮಸೀದಿಗಳನ್ನು ನಿರ್ಮಿಸಿದ್ದಾರೆ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಂಡು ಸಮನವಾಗಿ ಬದುಕಬೇಕಾಗಿದೆ ಎಂದು ಮಾಜಿ ಶಾಸಕ ಕೆ.ಅನ್ನದಾನಿ ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ವಿ.ಎಂ.ವಿಶ್ವನಾಥ್, ಪುರಸಭೆ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ಟಿ.ನಂದ ಕುಮಾರ್, ರವಿ, ಎಂ.ಟಿ.ಪ್ರಶಾಂತ್, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ವೀರೇಶ್ ಗೌಡ, ಮುಖಂಡರಾದ ಯಮದೂರು ಸಿದ್ದರಾಜು, ಜಯರಾಮು, ಹನುಮಂತು, ಕಾಂತರಾಜು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.