
ಮಳವಳ್ಳಿ: ತಾಲ್ಲೂಕಿನ ಕಿರುಗಾವಲು ಹೋಬಳಿಯ ದೇವಿಪುರ ಗ್ರಾಮದಲ್ಲಿ ಶುಕ್ರವಾರ ಮತ್ತು ಶನಿವಾರ ಗ್ರಾಮದೇವತೆ ಪಟ್ಟಲದಮ್ಮನ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮದ ಶಕ್ತಿ ದೇವತೆ ಪಟ್ಟಲದಮ್ಮನ ಹಬ್ಬದ ಪ್ರಮುಖವಾದ ಕೊಂಡೋತ್ಸವವು ಶನಿವಾರ ಬೆಳಿಗ್ಗೆ ನಡೆಯಿತು. ಅಲಂಕರಿಸಲಾಗಿದ್ದ ಎತ್ತಿನಗಾಡಿಯ ಮೆರವಣಿಗೆಗೆ ಶುಕ್ರವಾರ ಸಂಜೆ ಗ್ರಾಮದ ವೃತ್ತದ ಬಳಿ ಮಾಜಿ ಶಾಸಕ ಕೆ.ಅನ್ನದಾನಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸೌದೆ ತುಂಬಿದ್ದ ಎತ್ತಿನ ಗಾಡಿಯ ಮೆರವಣಿಗೆ ಹೊರವಲಯದ ಪಟ್ಟಲದಮ್ಮನ ದೇವಸ್ಥಾನದವರೆಗೆ ಸಾಗಿತು. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು.
ನಂತರ ಶುಕ್ರವಾರ ಮಧ್ಯರಾತ್ರಿ ಪಟ್ಟಲದಮ್ಮ ದೇವರಿಗೆ ಕಟ್ಟೆಯಿಂದ ಹೆಣ್ಣು ಮಕ್ಕಳು ಮೀಸಲು ನೀರು ತಂದು ಪೂಜೆ ಸಲ್ಲಿಸಿದರು. ವಿವಿಧ ಬಗೆಯ ಹೂಗಳಿಂದ ಅಲಂಕಾರಗೊಂಡಿದ್ದ ಪಟ್ಟಲದಮ್ಮ ಹಾಗೂ ಕರಗವನ್ನು ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದ ನೂರಾರು ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ದೇವಸ್ಥಾನದ ಆವರಣ ತಲುಪಿ ದೇವರಿಗೆ ಪೂಜೆ ಸಲ್ಲಿಸಿದರು.
ಶನಿವಾರ ಬೆಳಿಗ್ಗೆ ಅರ್ಚಕ ನಿಂಗೇಗೌಡ ಕೊಂಡ ಹಾಯ್ದರು. ವಿಜೃಂಭಣೆಯಿಂದ ನಡೆದ ಕೊಂಡೋತ್ಸವ ನೋಡಲು ಸುತ್ತಮುತ್ತಲಿನ ಹತ್ತಾರು ಗ್ರಾಮದ ಸಾವಿರಾರು ಮಂದಿ ನೆರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.