ಮಳವಳ್ಳಿಯ ತಾಲ್ಲೂಕು ಕಚೇರಿ ಬಳಿ ಪಾಳುಬಿದ್ದಿರುವ ತಹಶೀಲ್ದಾರ್ ವಸತಿಗೃಹ
ಮಳವಳ್ಳಿ: ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ನಿಟ್ಟಿನಲ್ಲಿ ಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ತಾಲ್ಲೂಕು ಕಚೇರಿ ಸಮೀಪದಲ್ಲಿಯೇ ತಹಶೀಲ್ದಾರ್ ವಾಸ್ತವ್ಯ ಮಾಡಲು ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ವಸತಿಗೃಹ ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ.
ತಹಶೀಲ್ದಾರ್ ಅವರು ತಾಲ್ಲೂಕು ಕಚೇರಿ ಸಮೀಪ ವಾಸವಿದ್ದರೆ ತುರ್ತು ಸಂದರ್ಭದಲ್ಲಿ ಕಚೇರಿಗೆ ಬರಲು ಹಾಗೂ ಅಧಿಕಾರಿಗಳು ಮತ್ತು ಸಾರ್ವಜನಿಕರ ಭೇಟಿಗೆ ಅನುಕೂಲವಾಗುತ್ತದೆ ಎಂಬ ಉದ್ದೇಶದಿಂದ 20 ವರ್ಷಗಳ ಹಿಂದೆ ₹70 ಲಕ್ಷ ವೆಚ್ಚದಲ್ಲಿ ವಸತಿ ಗೃಹವನ್ನು ನಿರ್ಮಿಸಲಾಗಿತ್ತು.
ಕಟ್ಟಡ ನಿರ್ಮಿಸಿದ ನಂತರ ಕೆಲವೇ ತಹಶೀಲ್ದಾರ್‌ಗಳು ವಾಸವಿದ್ದರು. ಇತ್ತೀಚೆಗೆ ಬಂದ ಮೂವರು ತಹಶೀಲ್ದಾರ್ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ನೀಡಿ ಬೇರೆಡೆ ವಾಸವಿದ್ದಾರೆ.
ಐದಾರು ವರ್ಷಗಳ ಹಿಂದೆ ನಿರ್ವಹಣೆ ಕೊರತೆಯಿಂದ ಈ ವಸತಿ ಗೃಹವು ಮಳೆ ಬಂದರೆ ಸೋರುತ್ತಿದೆ ಎಂಬ ಕಾರಣ ಹೇಳಿ ಈ ವಸತಿಗೃಹಕ್ಕೆ ಬೀಗ ಹಾಕಲಾಗಿದೆ. ಸೋರಿಕೆ ಕಂಡ ತಕ್ಷಣ ಅಲ್ಪ ಪ್ರಮಾಣದ ಹಣ ಖರ್ಚು ಮಾಡಿ ದುರಸ್ತಿ ಮಾಡಿದ್ದರೆ ಕಟ್ಟಡ ಇನ್ನಷ್ಟು ವರ್ಷ ಉಳಿಯುತ್ತಿತ್ತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಹಾಳುಕೊಂಪೆಯಾಗಿರುವ ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತು ಭೂತ ಬಂಗಲೆಯಂತೆ ಭಾಸವಾಗುತ್ತಿದೆ.
ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಬಂದು ಹೋಗುವ ರಸ್ತೆಯಲ್ಲಿಯೇ ವಸತಿ ಗೃಹದತ್ತ ಯಾರೂ ಕಣ್ಣಾಡಿಸಿಲ್ಲ ಎಂದರೆ ಇದು ಜಾಣ ಕುರುಡು ಎನಿಸುತ್ತದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಲೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ಮದುವೆ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿ ಎಂಬ ಉದ್ದೇಶದಿಂದ ನಿರ್ಮಿಸಿರುವ ಶಿಕ್ಷಕರ ಸಮುದಾಯ ಭವನ ಹಾಳುಕೊಂಪೆಯಾಗಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ.
1986ರಲ್ಲಿ ತಾಲ್ಲೂಕಿನಲ್ಲಿ ಒಂದು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಶಿಕ್ಷಕರ ವೃಂದ ಎಲ್ಲರಿಂದಲೂ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಾಣವಾಗಿತ್ತು. ಆರಂಭದಲ್ಲಿ ಸಭೆ- ಸಮಾರಂಭಗಳು ಮದುವೆಯಂಥ ಶುಭ ಕಾರ್ಯಕ್ರಮಗಳ ಸಹ ನಡೆಯುತ್ತಿದ್ದವು. ಖಾಸಗಿ ಕಾರ್ಯಕ್ರಮಗಳ ಜೊತೆಗೆ ವಾಣಿಜ್ಯ ವ್ಯಾಪಾರಗಳ ವಸ್ತುಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಸಹ ಏರ್ಪಡಿಸಿದ್ದವು. ಭವನದ ನಿರ್ವಹಣೆಗಾಗಿ ಗುರುಭವನ ನಿರ್ವಹಣಾ ಸಮಿತಿಯೂ ರಚನೆಯಾಗಿತ್ತು. ಆದರೆ ಹತ್ತಾರು ವರ್ಷಗಳಿಂದ ಕಟ್ಟಡದ ನಿರ್ವಹಣೆ ಸರಿ ಮಾಡುವ ಗೋಜಿಗೆ ಸಮಿತಿ ಮುಂದಾಗುತ್ತಿಲ್ಲ, ಅಲ್ಲದೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಮಿತಿಯ ಪದಾಧಿಕಾರಿಗಳ ನಿರ್ಲಕ್ಷ್ಯದಿಂದ ಈ ಕಟ್ಟಡದ ಸುತ್ತ ಗಿಡಗಂಟಿಗಳು ಬೆಳೆದು ಪಾಳು ಬಿದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.