ADVERTISEMENT

ಮಳವಳ್ಳಿ | ಸರ್ಕಾರಿ ವೈದ್ಯರ ಮೇಲೆ ಹಲ್ಲೆಗೆ ಯತ್ನ

ಅನಾರೋಗ್ಯದಿಂದ ಬಾಲಕಿ ಸಾವು; ಸಂಬಂಧಿಕರಿಂದ ದಾಂದಲೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:49 IST
Last Updated 5 ಸೆಪ್ಟೆಂಬರ್ 2025, 3:49 IST
ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರ ದಾಂದಲೆಯಿಂದ ಹಾನಿಗೊಳಗಾಗಿರುವ ಕಿಟಕಿಯ ಗಾಜು ಹಾಗೂ ಔಷಧಗಳು 
ಮಳವಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಯ ಸಂಬಂಧಿಕರ ದಾಂದಲೆಯಿಂದ ಹಾನಿಗೊಳಗಾಗಿರುವ ಕಿಟಕಿಯ ಗಾಜು ಹಾಗೂ ಔಷಧಗಳು    

ಮಳವಳ್ಳಿ: ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ಬಾಲಕಿಯೊಬ್ಬಳು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಬರುವ ಮುನ್ನವೇ ಮೃತಪಟ್ಟಿದ್ದು, ಆಕ್ರೋಶಗೊಂಡ ಬಾಲಕಿಯ ಸಂಬಂಧಿಕರು ಆಸ್ಪತ್ರೆಯ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆಗೆ ಯತ್ನ ನಡೆಸಿದ್ದಾರೆ. ಆಸ್ಪತ್ರೆ ಕಿಟಕಿಯ ಗಾಜು ಹಾಗೂ ಸಲಕರಣೆಗಳನ್ನು ಧ್ವಂಸಗೊಳಿಸಿರುವ ಘಟನೆ ಗುರುವಾರ ನಡೆದಿದೆ.

ಮೂಲತಃ ಕೊಳ್ಳೇಗಾಲ ಪಟ್ಟಣದ ಲೇ.ಜಕಾಉಲ್ಲಾ ಎಂಬುವವರ 17 ವರ್ಷದ ಪುತ್ರಿ ಕೆಲ ದಿನಗಳ ಹಿಂದೆ ಹಲಗೂರಿನ ತನ್ನ ಅಜ್ಜಿ ಮನೆಗೆ ಬಂದಿದ್ದಾಗ ಜ್ವರ ಕಾಣಿಸಿಕೊಂಡಿತ್ತು. ಬಾಲಕಿಗೆ ಬುಧವಾರ ಹಲಗೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ತೀವ್ರ ಅಸ್ವಸ್ಥಗೊಂಡಿದ್ದ ಬಾಲಕಿಯನ್ನು ಗುರುವಾರ ಬೆಳಿಗ್ಗೆ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ಆಸ್ಪತ್ರೆಗೆ ಬರುವ ಮುನ್ನ ಬಾಲಕಿ ಮೃತಪಟ್ಟಿದ್ದಳು ಎನ್ನಲಾಗಿದೆ.

ಬಾಲಕಿಯ ಬಾಯಲ್ಲಿ ನೊರೆ ಬರುತ್ತಿದ್ದನ್ನು ಗಮನಿಸಿದ ಆಸ್ಪತ್ರೆಯ ಕರ್ತವ್ಯನಿರತ ಡಾ.ಮುರುಳಿ ಅವರು ಪರೀಕ್ಷೆ ನಡೆಸಿದಾಗ, ಆಕೆ ಬರುವ ಮುನ್ನವೇ ಸಾವನ್ನಪ್ಪಿದ್ದಾರೆ ಎಂದು ಸಂಬಂಧಿಕರಿಗೆ ತಿಳಿಸಿದ್ದಾರೆ. ಇದರಿಂದ ಕುಪಿತರಾದ ಬಾಲಕಿಯ ಕೆಲ ಸಂಬಂಧಿಕರು ವೈದ್ಯರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಹಲ್ಲೆಗೆ ಮುಂದಾಗಿ, ತುರ್ತು ಚಿಕಿತ್ಸಾ ಘಟಕದ ಕಿಟಕಿಯ ಗಾಜುಗಳನ್ನು ಹೊಡೆದು ಹಾಕಿ ಔಷಧಗಳನ್ನು ನಾಶ ಪಡಿಸಿದ್ದಾರೆ.

ADVERTISEMENT

ಘಟನೆಯಿಂದ ಆಸ್ಪತ್ರೆಯ ಆವರಣದಲ್ಲಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ ಸಿಪಿಐ ಬಿ.ಜಿ.ಮಹೇಶ್ ಪರಿಸ್ಥಿತಿಯನ್ನು ತಿಳಿಗೊಳಿಸಿ ಹೆಚ್ಚಿನ ಭದ್ರತೆ ಕಲ್ಪಿಸಿದರು. 

ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಎಂ.ಡಿ.ಸಂಜಯ್, ವೈದ್ಯರ ಮೇಲಿನ ಹಲ್ಲೆಗೆ ಯತ್ನ ಮತ್ತು ಆಸ್ಪತ್ರೆಯಲ್ಲಿನ ದಾಂದಲೆಯ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆ ಕಿಟಕಿಯ ಗಾಜು, ಸಲಕರಣೆಗಳಿಗೆ ಹಾನಿ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.