ಮಳವಳ್ಳಿ: ಮೂರು ವರ್ಷಗಳ ನಂತರ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ತಾಲ್ಲೂಕಿನ ಶಿವನಸಮುದ್ರ(ಬ್ಲಫ್)ನಲ್ಲಿ ವಿಶ್ವಪ್ರಸಿದ್ಧ ಗಗನಚುಕ್ಕಿ ಜಲಪಾತೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಏಷ್ಯಾದಲ್ಲೇ ಮೊದಲ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಖ್ಯಾತಿಯ ಶಿವನಸಮುದ((ಬ್ಲಫ್) ನಡೆಯುತ್ತಿರುವ 7ನೇ ಜಲಪಾತೋತ್ಸವ ಇದಾಗಿದೆ. ಈ ಬಾರಿಯ ಉತ್ಸವಕ್ಕೆ ಗಗನಚುಕ್ಕಿ ಸಿಂಗಾರಗೊಂಡಿದೆ. ಜನರಿಗೆ ಸಾರಿಗೆ, ಶುದ್ಧ ಕುಡಿಯುವ ನೀರು, ಸುರಕ್ಷಣೆಗೆ ಭದ್ರತೆ, ತುರ್ತು ಚಿಕಿತ್ಸೆ, ವಿಶಾಲವಾದ ವಾಹನ ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ವಿವಿಧೆಡೆ ಆಗಮಿಸುವ ಪ್ರವಾಸಿಗರನ್ನು ರಂಜಿಸಲು ಪ್ರಖ್ಯಾತ ಕಲಾವಿದರಿಂದ ಜಾನಪದ, ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದ್ದು, ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. 15 ಸಾವಿರ ಜನರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳು, ಮಳೆಗೆ ಸೋರದಂಥ ಮೇಲ್ಛಾವಣಿ ಅಳವಡಿಸಲಾಗುತ್ತಿದೆ.
ಶುಕ್ರವಾರ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಜಿಲ್ಲಾಧಿಕಾರಿ ಕುಮಾರ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಬುಧವಾರ ಗಗನಚುಕ್ಕಿ ಜಲಪಾತೋತ್ಸವ ಸಿದ್ಧತೆಗಳನ್ನು ಪರಿಶೀಲಿಸಿದರು. ಹಿಂದಿನ ವರ್ಷಗಳಿಂತ ಈ ಬಾರಿ ಮತ್ತಷ್ಟು ವೈಭವಯುತವಾಗಿ ಉತ್ಸವ ಆಚರಿಸಲಾ ಗುವುದು. ವಿವಿಧ ಕಾರ್ಯಕ್ರಮಗಳಲ್ಲಿ 1 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭಾಗಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಕಲ್ಲುಗಳಿಗೂ ಜೀವ ಕಳೆ
ನೊರೆಹಾಲಿನಂತೆ ಗಗನದಿಂದ ದುಮ್ಮುಕ್ಕುವ ಕಾವೇರಿ ನದಿಯ ಸೌಂದರ್ಯದೊಂದಿಗೆ ಪ್ರವಾಸಿಗರನ್ನು ಆಕರ್ಷಿಸಲು ದೀಪಾಲಂಕಾರ ಮತ್ತು ಲೇಸರ್ ಚಿತ್ತಾರವನ್ನು ಮೂಡಿಸಿರುವುದರಿಂದ ಬೆಟ್ಟದ ಕಲ್ಲುಗಳಿಗೆ ಜೀವ ಕಳೆ ಬಂದಂತಾಗಿದೆ. ಶಿವನಸಮುದ್ರದ ರಸ್ತೆ ಉದ್ದಕ್ಕೂ ವಿದ್ಯುತ್ ದೀಪಗಳು ಹಾಗೂ ಬಣ್ಣ-ಬಣ್ಣದ ಬಂಟಿಗ್ಸ್ ಅಲಂಕಾರಗೊಳಿಸಲಾಗಿದೆ. ಪ್ರವಾಸಿಗರನ್ನು ಸ್ವಾಗತಿಸುವ ಫೆಕ್ಸ್ ರಾರಾಜಿಸುತ್ತಿವೆ.
ಮುಖ್ಯಮಂತ್ರಿ ಚಾಲನೆ
ಶನಿವಾರ ಸಂಜೆ 6ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಗನಚಯಕ್ಕಿ ಜಲಪಾತೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಸಚಿವರಾದ ಎಚ್.ಕೆ.ಪಾಟೀಲ್ ಶಿವರಾಜ್ ತಂಗಡಗಿ ಜಿಲ್ಲೆಯ ಶಾಸಕರು ಭಾಗಿಯಾಗಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ಸಂಕೇತಿಕ ಚಾಲನೆ ದೊರೆಯಲಿದೆ. ಮಧ್ಯಾಹ್ನ 2 ಗಂಟೆಗೆ ನಾಗೇಶ್ ಕಂದೇಕಾಲ ತಂಡದಿಂದ ಭಾವಗೀತೆಗಳು ಸಂಜೆ 7ಗಂಟೆಗೆ ಮಣಿಕಾಂತ್ ಕದ್ರಿ ಚಂದನ್ ಶೆಟ್ಟಿ ಹಂಸಿಕಾ ಅಯ್ಯರ್ ತಂಡದವರಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಭಾನುವಾರ ಬೆಳಿಗ್ಗೆ 11 ಗಂಟೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 2ಗಂಟೆಗೆ ಸರಿಗಮಪ ತಂಡದವರಿಂದ ಸಂಗೀತ ಸಂಜೆ 4.30ಕ್ಕೆ ಗಿಚ್ಚಿ ಗಿಲಿಗಿಲಿ ತಂಡದವರಿಂದ ಹಾಸ್ಯ ಸಂಜೆ 6ಗಂಟೆಗೆ ರವಿ ಬಸ್ರೂರು ತಂಡದವರಿಂದ ಸಂಗೀತ ಸಂಜೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.