
ಮಳವಳ್ಳಿ: ಪಟ್ಟಣದ ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ 2. 32 ಎಕರೆ ಜಾಗವನ್ನು ಮಂಗಳವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿದ ತಾಲ್ಲೂಕು ಆಡಳಿತ ವಶಕ್ಕೆ ಪಡೆದುಕೊಂಡಿದೆ.
ಸರ್ವೆ ನ. 595/2 ಮತ್ತು ಹಾಗೂ 560ಕ್ಕೆ ಸಂಬಂಧಿಸಿದ ಜಾಗ ಒತ್ತುವರಿಯಾಗಿದೆ ಎಂಬ ವಿವಾದ ಪುರಸಭೆ ಹಾಗೂ ಒತ್ತುವರಿದಾರರ ನಡುವೆ 1987ರಿಂದಲೂ ವ್ಯಾಜ್ಯ ಉಂಟಾಗಿ ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದಿತ್ತು. ಅಂತಿಮವಾಗಿ ಹೈಕೋರ್ಟ್‌ನಲ್ಲಿ ಪುರಸಭೆ ಪರ ತೀರ್ಪು ಬಂದ ಹಿನ್ನೆಲೆಯಲ್ಲಿ ಸರ್ವೆ ನಡೆಸಿದ ಅಧಿಕಾರಿಗಳು ಒತ್ತುವರಿ ಜಾಗವನ್ನು ತೆರವುಗೊಳಿಸಿದರು.
ಕಂದಾಯ, ಪುರಸಭೆ ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಹಾಗೂ ಡಿವೈಎಸ್ ಪಿ ಎಸ್.ಬಿ.ಯಶವಂತ ಕುಮಾರ್ ನೇತೃತ್ವದ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಎಸ್.ವಿ.ಲೋಕೇಶ್ ತೆರವು ಕಾರ್ಯಾಚರಣೆ ಆರಂಭಿಸಿದರು.
ಮೊದಲಿಗೆ ಸರ್ವೆ ಅಧಿಕಾರಿಗಳು ಎರಡು ಸರ್ವೆ ನಂಬರ್‌ಗೆ ಸೇರಿದ ಜಾಗವನ್ನು ಅಳತೆ ಮಾಡಿ ಹದ್ದುಬಸ್ತ್ ಗುರುತಿಸಿದ ನಂತರ ಒತ್ತುವರಿ ಜಾಗದಲ್ಲಿ ಬೆಳೆದಿದ್ದ ಗಿಡಗಂಟೆಗಳು ಹಾಗೂ ಮರಗಳನ್ನು ತೆರವುಗೊಳಿಸುವ ಕಾರ್ಯ ಆರಂಭವಾಯಿತು. ಪುರಸಭೆಯ ಹಲವಾರು ಮಂದಿ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತೆರವು ಕಾರ್ಯಾಚರಣೆ ನಿಮಿತ್ತ ಡಿವೈಎಸ್ ಪಿ ಎಸ್.ಬಿ.ಯಶವಂತ್ ಕುಮಾರ್, ಸಿಪಿಐಗಳಾದ ಬಿ.ಎಸ್.ಶ್ರೀಧರ್, ಬಿ.ಜೆ.ಮಹೇಶ್, ಎಂ.ರವಿಕುಮಾರ್, ಪಿಎಸ್ಐ ಪ್ರಕಾಶ್ ಸೇರಿದಂತೆ 100ಕ್ಕೂ ಅಧಿಕ ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದರು. ದಿನವೀಡಿ ಕಾರ್ಯಾಚರಣೆ ನಡೆಯಿತು.
ಈ ಬಗ್ಗೆ ತಹಶೀಲ್ದಾರ್ ಎಸ್.ವಿ.ಲೋಕೇಶ್ ಪ್ರತಿಕ್ರಿಯಿಸಿ, ‘ಈ ಜಾಗವನ್ನು 1987ರಲ್ಲೇ ಪುರಸಭೆಗೆ ನೀಡಲಾಗಿತ್ತಾದರೂ ಅಂದಿನಿಂದಲೂ ಈ ಜಮೀನು ವಿವಾದ ವಿವಿಧ ಹಂತದ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಇದೀಗ ಹೈಕೋರ್ಟ್ ಈ ಜಾಗಕ್ಕೆ ಸಂಬಂಧಿಸಿದಂತೆ ಪುರಸಭೆ ಪರ ಆದೇಶ ನೀಡಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸಿ ಅದನ್ನು ಪುರಸಭೆಯ ವಶಕ್ಕೆ ನೀಡಲಾಗುತ್ತಿದೆ’ ಎಂದರು.
ಒತ್ತುವರಿ ಜಾಗದಲ್ಲಿ ಸಮಾಧಿ
‘ಒತ್ತುವರಿಯಾಗಿರುವ ಸುಮಾರು 2 ಎಕರೆ 32 ಗುಂಟೆ ಜಾಗದಲ್ಲಿ ಕೇಂದ್ರದ ಮಾಜಿ ರಾಜ್ಯ ಸಚಿವ ದಿ.ಎಂ.ವಿ. ಚಂದ್ರಶೇಖರ್ ಮೂರ್ತಿ ಅವರ ಸಮಾಧಿ ಇರುವ ಗಮನ ಸೆಳೆದಾಗ ಪ್ರತಿಕ್ರಿಯಿಸಿದ ತಹಶೀಲ್ದಾರ್ ಎಸ್.ವಿ.ಲೋಕೇಶ್ ಸಮಾಧಿಯನ್ನು ತಾವು ತೆರವುಗೊಳಿಸುವುದಿಲ್ಲ ಜಾಗ ಮಾತ್ರ ವಶಕ್ಕೆ ಪಡೆದುಕೊಂಡಿದ್ದು ಸರ್ಕಾರದ ಸೂಚನೆಯಂತೆ ಕ್ರಮ ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.