
ಶ್ರೀರಂಗಪಟ್ಟಣ: ‘ಪುರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಪ್ರವಾಸಿಗರ ಮೇಲೆ ದಾಳಿ ಮಾಡುತ್ತಿದ್ದು, ಅವುಗಳ ಉಪಟಳ ತಡೆಗೆ ಕ್ರಮ ವಹಿಸಬೇಕು’ ಎಂದು ಪುರಸಭೆ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು.
ಪಟ್ಟಣದಲ್ಲಿ ಮಂಗಳವಾರ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಎಸ್. ಪ್ರಕಾಶ್, ಗಂಜಾಂ ಶಿವು, ಎಂ. ಶ್ರೀನಿವಾಸ್ ಇತರರು ನಾಯಿಗಳಿಂದ ಉಂಟಾಗುತ್ತಿರುವ ತೊಂದರೆಯನ್ನು ಪ್ರಸ್ತಾಪಿಸಿದರು.
‘ಶ್ರದ್ಧಾ ಕೇಂದ್ರ ಪಶ್ಚಿಮವಾಹಿನಿಗೆ ಬಂದಿದ್ದ ಯಾತ್ರಾರ್ಥಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಬಟ್ಟೆ ಹರಿದು ಗಾಯಗೊಳಿಸಿವೆ. ಸ್ನಾನಘಟ್ಟ, ಶ್ರೀರಂಗನಾಥಸ್ವಾಮಿ ದೇವಾಲಯ ಇತರೆಡೆ ಕೂಡ ಇಂತಹ ಪ್ರಕರಣಗಳು ವರದಿಯಾಗಿವೆ. ಪಟ್ಟಣ ಮತ್ತು ಗಂಜಾಂನಲ್ಲಿ ಒಂದು ತಿಂಗಳ ಈಚೆಗೆ ಏಳೆಂಟು ಮಂದಿ ಸಾರ್ವಜನಿಕರನ್ನು ನಾಯಿಗಳು ಕಚ್ಚಿ ಗಾಯಗೊಳಿವೆ. ಬೀದಿ ನಾಯಿಗಳನ್ನು ಹಿಡಿಸಿ ದೂರ ಬಿಡಬೇಕು’ ಎಂದು ಒತ್ತಾಯಿಸಿದರು.
‘ಹೊರಗುತ್ತಿಗೆ ನೌಕರರಿಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ. ಇಎಸ್‌ಐ, ಪಿಎಫ್ ಸೌಲಭ್ಯವನ್ನೂ ಕೊಡುತ್ತಿಲ್ಲ. ಗುತ್ತಿಗೆದಾರರನ್ನು ಬದಲಿಸಬೇಕು’ ಎಂದು ಸದಸ್ಯರು ಹೇಳಿದರು. ’ಸ್ಮಶಾನಗಳನ್ನು ಅಭಿವೃದ್ಧಿಪಡಿಸಬೇಕು. ಅಗತ್ಯ ಇರುವ ಕಡೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು. ಪಟ್ಟಣದ 1, 5, 17, 20 ಮತ್ತು 21ನೇ ವಾರ್ಡ್‌ಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನಿವೇಶನ ಮಂಜೂರು ಮಾಡಬೇಕು’ ಎಂದು ರಾಧಾ ಶ್ರೀಕಂಠು ಇತರರು ಮನವಿ ಮಾಡಿದರು.
ಅಧ್ಯಕ್ಷ ಎಂ.ಎಲ್. ದಿನೇಶ್ ಮಾತನಾಡಿ, ‘ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ₹5 ಕೋಟಿ ಅನುದಾನ ನೀಡಿದ್ದಾರೆ. ಮೂರು ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ ₹7 ಕೋಟಿ ಅನುದಾನ ಲಭ್ಯವಿದ್ದು, ಡಿಪಿಆರ್ ಸಿದ್ದಪಡಿಸಿ ಕಳುಹಿಸಿಕೊಡಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ನ.5ರಂದು ಜನಪ್ರತಿನಿಧಿಗಳ ಅಧಿಕಾರದ ಅವಧಿ ಮುಗಿಯಲಿದ್ದು, ಅಧಿಕಾರಿಗಳು ಜನರ ಕೆಲಸಗಳನ್ನು ವಿಳಂಬ ಮತ್ತು ಲೋಪವಿಲ್ಲದಂತೆ ಮಾಡಿಕೊಡಬೇಕು’ ಎಂದು ಎಂ.ಎಲ್. ದಿನೇಶ್ ಹೇಳಿದರು.
ಸದಸ್ಯರಾದ ನಿರ್ಮಲಾ, ವಸಂತಕುಮಾರಿ ಲೋಕೇಶ್, ಎಸ್.ಎನ್. ದಯಾನಂದ್, ಎಸ್.ಟಿ. ರಾಜು, ನರಸಿಂಹೇಗೌಡ, ಕೃಷ್ಣಪ್ಪ, ಪಾರ್ವತಿ, ಪೂರ್ಣಿಮಾ, ಕೆ.ಬಿ. ಬಸವರಾಜು, ದೀಪು ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಅಧ್ಯಕ್ಷ ಮತ್ತು ಸದಸ್ಯರನ್ನು ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.