ಮಳವಳ್ಳಿ: ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಮುಟ್ಟಿನ ಕಪ್ ಬಳಕೆಯ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತರಬೇತಿ ನೀಡುವ ಮೂಲಕ ಜಾಗೃತಿ ಮೂಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತಿ ಸಿಇಒ ಕೆ.ಆರ್.ನಂದಿನಿ ಸೂಚಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮುಟ್ಟಿನ ಕಪ್ ಬಳಕೆ ಬಗ್ಗೆ ಎರಡು ದಿನಗಳ ಕಾಲ ನಡೆದ ತರಬೇತಿ ಕಾರ್ಯಗಾರ ಹಾಗೂ ಕೈ ತೊಳೆಯುವ ದಿನದ ಕಾರ್ಯಕ್ರಮದಲ್ಲಿ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಇಒ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿ ಇತರೆ ಇಲಾಖೆಯ ಅಧಿಕಾರಿಗಳು ಒಗ್ಗೂಡಿ, ಮಹಿಳೆಯರ ಆರೋಗ್ಯ ಸುರಕ್ಷತೆಗೆ ಮುಟ್ಟಿನ ಕಪ್ ಸಹಕಾರಿ ಎನ್ನುವುದರ ಬಗ್ಗೆ ಹಳ್ಳಿಯ ಜನರಿಗೆ ಮನವರಿಕೆ ಮಾಡಿಕೊಡುವ ಕಾರ್ಯ ಯಶಸ್ವಿಗೊಳಿಸಬೇಕು ಎಂದು ತಾಲ್ಲೂಕು ಅನುಷ್ಠಾನ ಸಮಿತಿಗೆ ಸೂಚಿಸಿದರು.
ಮಹಿಳೆಯರು ಮುಟ್ಟಿನ ಕಪ್ ಬಳಸುವುದರಿಂದ ಮುಟ್ಟಿನ ಸಮಯಯಲ್ಲಿ ಎದುರಿಸಬೇಕಾದ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಸುಮಾರು 10 ವರ್ಷಗಳ ಕಾಲ ಬಳಸಿಕೊಳ್ಳಬಹುದಾಗಿರುವುದರಿಂದ ಹಣ ಸಹ ಉಳಿತಾಯ ಮಾಡಬಹುದಾಗಿದೆ ಎಂದು ಹೇಳಿದರು.
ಈಗಾಗಲೇ ಎರಡು ದಿನ ತರಬೇತಿ ಪಡೆದಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಕೃಷಿ ಸಖಿ, ಪಶು ಸಖಿ, ಮಹಿಳಾ ವಾರ್ಡನ್‌ಗಳು, ಶಿಕ್ಷಕಿಯರು, ವಿದ್ಯಾರ್ಥಿಗಳು ಸೇರಿ ಎಲ್ಲ ಇಲಾಖೆಗಳ ಮಹಿಳಾ ಸಿಬ್ಬಂದಿ ಮುಟ್ಟಿನ ಕಪ್ ಬಳಸುವುದರ ಮೂಲಕ ಪರಿಣಾಮಯಾಗಿ ಜನರಲ್ಲಿ ಅರಿವು ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ವೀರಭದ್ರಪ್ಪ ಮಾತನಾಡಿ, ರೋಗಗಳ ನಿಯಂತ್ರಿಸಲು ಪ್ರತಿಯೊಬ್ಬರು ತಮ್ಮ ಕೈಗಳನ್ನು ಸಾಬೂನು ಬಳಸಿ ಸ್ವಚ್ಛ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆ ವತಿಯಿಂದ ಯಾವ ರೀತಿ ಕೈ ತೊಳೆದುಕೊಳ್ಳಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೈತೊಳೆಯುವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಧುಶ್ರೀ, ತಾ.ಪಂ. ಇಒ ಎಚ್.ಜಿ.ಶ್ರೀನಿವಾಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಈ.ನಂಜಾಮಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಸಂತೋಷಕುಮಾರ್, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪಾರ್ಥಸಾರಥಿ, ಸ್ತ್ರೀ ರೋಗ ತಜ್ಞ ವೈದ್ಯರಾದ ಡಾ.ಶಿಲ್ಪಾ, ಡಾ.ಶ್ವೇತ, ಡಾ.ಜ್ಯೋತಿ ಜಯರಾಮ್, ಡಾ.ಲಕ್ಷ್ಮಿ, ಜಿಲ್ಲಾ ಪಂಚಾಯಿತಿಯ ಚನ್ನೇಗೌಡ, ತಾಲ್ಲೂಕು ಸಂಪನ್ಮೂಲ ಅಧಿಕಾರಿ ಸ್ಫೂರ್ತಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.