ADVERTISEMENT

ಮನರಂಜಿಸಿದ ಮಲ್ಲಕಂಬ

ದಶವಿಧ ಗಂಗಾಜಯಂತಿ ಅಂಗವಾಗಿ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 17:17 IST
Last Updated 23 ಜೂನ್ 2018, 17:17 IST
ಗಂಗಾಜಯಂತಿ ಮಹೋತ್ಸವದ ಅಂಗವಾಗಿ ಮಳವಳ್ಳಿಯಲ್ಲಿ ಶುಕ್ರವಾರ ಮಲ್ಲಕಂಬ ಹತ್ತುವ ಸ್ಪರ್ಧೆ ನಡೆಯಿತು
ಗಂಗಾಜಯಂತಿ ಮಹೋತ್ಸವದ ಅಂಗವಾಗಿ ಮಳವಳ್ಳಿಯಲ್ಲಿ ಶುಕ್ರವಾರ ಮಲ್ಲಕಂಬ ಹತ್ತುವ ಸ್ಪರ್ಧೆ ನಡೆಯಿತು   

ಮಳವಳ್ಳಿ: ಗಂಗಾ ಜಯಂತಿ ಮಹೋತ್ಸವದ ಅಂಗವಾಗಿ ಪಟ್ಟಣದ ರಾಮಾರೂಢ ಮಠದ ಆವರಣದಲ್ಲಿ ಶುಕ್ರವಾರ ನಡೆದ ಮಲ್ಲಕಂಬ ಹತ್ತುವ ಸ್ಪರ್ಧೆ ನೆರೆದ ಜನರ ಮನರಂಜಿಸಿತು.

ಗಂಗಾಮತ ಸಮುದಾಯದ ಯಜಮಾನುರುಗಳ ನೇತೃತ್ವದಲ್ಲಿ ಪಟ್ಟಣದ ರಾಮರೂಢ ಮಠದ ಆವರಣಲ್ಲಿ ಸಿದ್ಧಗೊಳಿಸಿದ್ದ ಸುಮಾರು 30 ಅಡಿ ಎತ್ತರದ ಮಲ್ಲಕಂಬಕ್ಕೆ ಬೆಣ್ಣೆ ಹಾಗೂ ಎಣ್ಣೆ ಲೇಪನ ಮಾಡಿ ಕಂಬ ಹತ್ತುವ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಸ್ಪರ್ಧೆಯಲ್ಲಿ ಪೈಲ್ವಾನ್‌ರು ಮತ್ತು ಯುವಕರು ಮಲ್ಲಕಂಬವನ್ನು ಹತ್ತಲು ನಾನಾ ಕಸರತ್ತು ನಡೆಸಿದರು. ಉತ್ಸಾಹಿ ಯುವಕರನ್ನು ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಹೊಡೆದು ಹತ್ತುವಂತೆ ಹುರಿದುಂಬಿಸುತ್ತಿದ್ದರು. ಸುಮಾರು ಎರಡು ಗಂಟೆಗೂ ಅಧಿಕ ಸಮಯ ಕಂಬವೇರಲು ಕಸರತ್ತು ನಡೆಸುತ್ತಿದ್ದರು. ಸ್ಪರ್ಧಾಳುಗಳು ಗುರಿ ಮುಟ್ಟುವುದನ್ನು ತಪ್ಪಿಸಲು ಸುತ್ತಲು ನಿಂತಿದ್ದ ಕೆಲವರು ಕಂಬಕ್ಕೆ ನೀರು ಎರಚುತ್ತಿದ್ದಂತೆ ಸರ್ರನೇ ಜಾರಿ ಕೆಳ ಬರುತ್ತಿದ್ದರು. ಹಲವು ಬಾರಿ ಕೆಳ ಬಂದರೂ, ಛಲಬಿಡದ ಮಲ್ಲರು ಮತ್ತೆ ಮತ್ತೆ ಯತ್ನಿಸುತ್ತಿದ್ದರು. ಅದರಲ್ಲಿ ಕೆಲವರು ಯಶಸ್ವಿಯಾಗಿ ಕಂಬವೇರಿ ಹಾಲಿನ ಗಡಿಗೆಯನ್ನು ಒಡೆದು ಬಹುಮಾನ ಗಳಿಸಿದರು.

ADVERTISEMENT

ಸ್ಪರ್ಧೆಗೆ ಚಾಲನೆ ನೀಡಿದ ಬಾಗಲಕೋಟೆ ಪರಮರಾಮಾರೂಢ ಸ್ವಾಮೀಜಿ, ‘ಗಂಗಾಮತ ಸಮುದಾಯದ ಜನರು ಗಂಗಾ ಮಾತೆಯನ್ನು ಶ್ರದ್ಧಾಭಕ್ತಿಯಿಂದ 10 ದಿನಗಳ ಕಾಲ ಗಂಗಾಜಯಂತಿಯನ್ನಾಗಿ ಸಡಗರ ಸಂಭ್ರಮದಿಂದ ಪೂಜಿಸುತ್ತೇವೆ. ಜೊತೆಗೆ ನಮ್ಮ ಪೂರ್ವಜರು ನಡೆಸಿಕೊಂಡು ಬಂದಿರುವ ಪ್ರತಿಯೊಂದು ಕಲೆಗಳನ್ನು ಸ್ಪರ್ಧೆಯ ರೂಪದಲ್ಲಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ಕೊನೆಯ ದಿನದಂದು ಮನರಂಜನೆ ಹಾಗೂ ಯುವಕರ ದೈಹಿಕ ಸಾಮರ್ಥ್ಯ ಪ್ರದರ್ಶನ ಮಾಡಲು ಪ್ರತಿವರ್ಷ ಮಲ್ಲಕಂಬ ಹತ್ತುವ ಸ್ಪರ್ಧೆಯನ್ನು ಆಯೋಜಿರುವುದು ಉತ್ತಮ ಬೆಳವಣಿಗೆ ಎಂದರು.

ಬಸವಾನಂದ ಸ್ವಾಮೀಜಿ, ಸಮುದಾಯದ ಯಜಮಾನರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.