ADVERTISEMENT

ಜಿಲ್ಲೆಯ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ

ಆರೋಗ್ಯ ತಸಾಸಣೆ ಶಿಬಿರ; ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 13:26 IST
Last Updated 21 ಆಗಸ್ಟ್ 2019, 13:26 IST
ಮಿಮ್ಸ್‌ ಆಸ್ಪತ್ರೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು
ಮಿಮ್ಸ್‌ ಆಸ್ಪತ್ರೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರು ಮಕ್ಕಳ ಆರೋಗ್ಯ ತಪಾಸಣೆ ನಡೆಸಲಾಯಿತು   

ಮಂಡ್ಯ: ‘ಜಿಲ್ಲೆಯಲ್ಲಿ 300 ಮಕ್ಕಳು ತೀವ್ರ ಅಪೌಷ್ಟಿತೆಯಿಂದ ಬಳಲುತ್ತಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವತ್ತ ಪೋಷಕರು ಗಮನಹರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಯಾಲಕ್ಕಿಗೌಡ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಮಿಮ್ಸ್‌ ಆಸ್ಪತ್ರೆಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಪೌಷ್ಟಿಕ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಸರಿಯಾದ ತಿಳಿವಳಿಕೆ ಇಲ್ಲದ ಕಾರಣ ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬರುತ್ತಿದೆ. ಅಪೌಷ್ಟಿಕತೆ ಮಕ್ಕಳ ಬೆಳವಣಿಗೆ ಕುಂಠಿಸುತ್ತದೆ. ಇದರಿಂದ ನಾನಾ ರೀತಿಯ ದೈಹಿಕ ನ್ಯೂನತೆಗಳು ಉಂಟಾಗಿ ಪೋಷಕರನ್ನು ಚಿಂತೆಗೀಡು ಮಾಡುತ್ತದೆ. ಇದನ್ನು ನಿರ್ಲಕ್ಷ್ಯ ಮಾಡದೇ ಕಾಳಜಿ ವಹಿಸಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರು ಸಹಕರಿಸಬೇಕು. ಇದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದ್ದು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ ಮಾತನಾಡಿ ‘ಅಪೌಷ್ಟಿಕತೆ ಪ್ರಮಾಣ ಕಡಿಮೆ ಇರುವುದರಲ್ಲಿ ಜಿಲ್ಲೆ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿರುವ 300 ಅಪೌಷ್ಟಿಕ ಮಕ್ಕಳಲ್ಲಿ 139 ಮಕ್ಕಳು ಮಾತ್ರ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಎಲ್ಲಾ ಮಕ್ಕಳನ್ನು ಅಪೌಷ್ಟುಇಕತೆಯಿಂದ ಮುಕ್ತಗೊಳಿಸುವುದು ಶಿಬಿರದ ಉದ್ದೇಶವಾಗಿದೆ’ ಎಂದರು.

‘ಜಿಲ್ಲೆಯ ಎಲ್ಲಾ ಭಾಗದಿಂದ ಮಕ್ಕಳು ಬಂದಿದ್ದು, ಶ್ವಾಸಕೋಶ, ಕಿಡ್ನಿ, ಹೃದಯ ತೊಂದರೆ ಸೇರಿದಂತೆ ಹಲವು ಸಮಸ್ಯೆ ಮಕ್ಕಳಲ್ಲಿ ಬೆಳವಣಿಗೆ ಕುಂಠಿತಗೊಂಡಿದೆ. ಇಂತಹ ಮಕ್ಕಳನ್ನು ನೋಂದಣಿ ಮಾಡಿಕೊಂಡು ಎತ್ತರ ಹಾಗೂ ತೂಕವನ್ನು ಪರಿಶೀಲಿಸಲಾಗುವುದು. ನಂತರ ತಜ್ಞ ವೈದ್ಯರ ಬಳಿ ತಪಾಸಣೆಗೆ ಒಳಪಡಿಸಿ ಆ ಮಕ್ಕಳಿಗೆ ಎಕೋ, ಸಿಟಿ ಸ್ಕ್ಯಾನ್, ಎಕ್ಸ್-ರೇ, ಮೂತ್ರ, ರಕ್ತ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುವುದು. ಈ ಮೂಲಕ ಮಕ್ಕಳಲ್ಲಿರುವ ಅಪೌಷ್ಟಿಕತೆಯ ಪ್ರಮಾಣವನ್ನು ಗುರುತಿಸಿ ಔಷಧ, ಪೌಷ್ಟಿಕ ಆಹಾರಗಳನ್ನು ಸ್ಥಳದಲ್ಲೇ ಕೊಡಲಾಗುತ್ತದೆ’ ಎಂದು ಹೇಳಿದರು.

‘ಮಿಮ್ಸ್‌ನಲ್ಲಿ 40 ಮಕ್ಕಳನ್ನು ದಾಖಲಿಸಬಹುದಾದ ಅಪೌಷ್ಟಿಕ ಮಕ್ಕಳ ಪುನರ್ವಸತಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ತಾಯಿ ಹಾಗೂ ಮಕ್ಕಳಿಗೆ ಉಚಿತವಾಗಿ 14 ದಿನಗಳವರೆಗೆ ಆಹಾರ ನೀಡುವುದಲ್ಲದೆ, ಪ್ರತಿ ದಿನದ ಕೂಲಿ ₹ 259 ಕೊಡಲಾಗುತ್ತಿದೆ. ಪ್ರತಿ ತಿಂಗಳು 20 ಮಕ್ಕಳು ಇಲ್ಲಿ ದಾಖಲಾಗುತ್ತಿದ್ದಾರೆ. ಮಳವಳ್ಳಿ ಪುನಶ್ಚೇತನ ಕೇಂದ್ರದಲ್ಲಿ 5 ಮಕ್ಕಳು ದಾಖಲಾಗುತ್ತಿದ್ದು, ಉಳಿದ ತಾಲೂಕು ಕೇಂದ್ರಗಳಲ್ಲಿ 2 ಹಾಸಿಗೆಯುಳ್ಳ ಕೇಂದ್ರ ತೆರೆಯಲು ಈಗಾಗಲೇ ಸೂಚಿಸಲಾಗಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿ.ರಾಜಮೂರ್ತಿ, ಮಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ತಮ್ಮಣ್ಣ, ಡಾ.ಕೀರ್ತಿ, ಸ್ಥಾನಿಕ ವೈದ್ಯಾಧಿಕಾರಿ ಡಾ.ರವೀಂದ್ರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಶಿವಾನಂದ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚೇತನ್‌ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.