ADVERTISEMENT

ಮಂಡ್ಯ: ಪೊಲೀಸರ ಗ್ರಾಮ ವಾಸ್ತವ್ಯ ನಾಳೆಯಿಂದ

ಎಸ್‌ಪಿ ಸೇರಿ ಎಲ್ಲಾ ಹಂತದ ಅಧಿಕಾರಿಗಳು ಭಾಗಿ, ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಗುರಿ

ಎಂ.ಎನ್.ಯೋಗೇಶ್‌
Published 8 ಜೂನ್ 2019, 19:45 IST
Last Updated 8 ಜೂನ್ 2019, 19:45 IST
ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ
ಮಂಡ್ಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ   

ಮಂಡ್ಯ: ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವ ಉದ್ದೇಶದಿಂದ ಜೂನ್‌ 10ರಿಂದ ಜಿಲ್ಲಾ ಪೊಲೀಸರು ಗ್ರಾಮ ವಾಸ್ತವ್ಯ ಆರಂಭಿಸಲಿದ್ದಾರೆ.

‘ಜನಸ್ನೇಹಿ ಪೊಲೀಸ್‌’ ವ್ಯವಸ್ಥೆಯ ಭಾಗವಾಗಿ ಪೊಲೀಸ್‌ ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಸಿದ್ಧಗೊಳ್ಳುತ್ತಿರುವಾಗಲೇ ಜಿಲ್ಲೆಯ ಪೊಲೀಸರು ಗ್ರಾಮಗಳಿಗೆ ತೆರಳುತ್ತಿರುವುದು ಮಹತ್ವ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯ ಪೊಲೀಸರು ಗ್ರಾಮಗಳಲ್ಲಿ ರಾತ್ರಿ ಕಳೆಯಲಿದ್ದಾರೆ. ಎಲ್ಲಾ ಹಂತದ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜ್‌ ಗ್ರಾಮ ವಾಸ್ತವ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಿಬ್ಬಂದಿಯ ಜೊತೆ ಸಭೆ ನಡೆಸಿ ಗ್ರಾಮಗಳಿಗೆ ತೆರಳುವಂತೆ ಸೂಚನೆ ಕೊಟ್ಟಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿ ಡಿವೈಎಸ್‌ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಐ ಹಾಗೂ ಇತರ ಸಿಬ್ಬಂದಿ ಗ್ರಾಮಗಳಲ್ಲಿ ತಂಗಲಿದ್ದಾರೆ.

ADVERTISEMENT

15 ದಿನಗಳಿಗೊಮ್ಮೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಒಂದು ರಾತ್ರಿಯನ್ನು ಹಳ್ಳಿಯಲ್ಲಿ ಕಳೆಯಲಿದ್ದಾರೆ. ಡಿವೈಎಸ್‌ಪಿ, ಸರ್ಕಲ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌ ವಾರಕ್ಕೆ ಒಂದು ದಿನ ವಾಸ್ತವ್ಯ ಮಾಡಲಿದ್ದಾರೆ. ಎಸ್‌ಐ, ಎಎಸ್‌ಐ ಹಾಗೂ ಕಾನ್‌ಸ್ಟೆಬಲ್‌ಗಳು ವಾರದಲ್ಲಿ ಎರಡು ದಿನಗಳು ಹಳ್ಳಿಗಳಲ್ಲಿ ರಾತ್ರಿ ಕಳೆಯಲಿದ್ದಾರೆ. ಈಗಾಗಲೇ ವೇಳಾಪಟ್ಟಿ ಸಿದ್ಧಗೊಂಡಿದ್ದು, ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಲಿದ್ದಾರೆ.

‘ಗ್ರಾಮ ವಾಸ್ತವ್ಯಕ್ಕೆ ಪೊಲೀಸ್‌ ಪ್ರಧಾನ ಕಚೇರಿಯಿಂದಲೇ ಆದೇಶ ಬಂದಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಸೂಕ್ಷ್ಮ ಗ್ರಾಮ ಹಾಗೂ ಬಡಾವಣೆಗಳನ್ನು ಗುರುತಿಸಲಾಗಿದೆ. ನಾವು ವಾಸ್ತವ್ಯ ಮಾಡುವ ರಾತ್ರಿಯನ್ನು ಗ್ರಾಮದಲ್ಲಿರುವ ಕಾನೂನಾತ್ಮಕ ಸಮಸ್ಯೆಗಳನ್ನು ಬಗೆಹರಿಸಲು ಬಳಸಿಕೊಳ್ಳುತ್ತೇವೆ’ ಎಂದು ಶಿವಪ್ರಕಾಶ್‌ ದೇವರಾಜ್‌ ಹೇಳಿದರು.

ಗ್ರಾಮ ಗುರುತು ಹೇಗೆ?: ಗ್ರಾಮ ವಾಸ್ತವ್ಯಕ್ಕೆ ಹಳ್ಳಿಗಳು ಮಾತ್ರವಲ್ಲದೇ ನಗರದ ಪ್ರದೇಶದ ಬಡಾವಣೆಗಳನ್ನೂ ಆಯ್ಕೆ ಮಾಡಲಾಗಿದೆ. ಗ್ರಾಮಗಳ ಆಯ್ಕೆಯಲ್ಲಿ ಹಲವು ಮಾನದಂಡಗಳನ್ನು ಅನುಸರಿಸಲಾಗಿದೆ. ಒಂದು ಹಳ್ಳಿಯಲ್ಲಿ 10 ವರ್ಷಗಳಿಂದ ರಾಜಕೀಯ ಘರ್ಷಣೆ, ಕೋಮುಗಲಭೆ, ಜಾತಿ ತಕರಾರು ಇರುವ ಗ್ರಾಮಗಳನ್ನು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಅಕ್ರಮ ಚಟುವಟಿಕೆ,
ಅಪರಿಚಿತ ವ್ಯಕ್ತಿಗಳ ಭೇಟಿ, ಪದೇ ಪದೇ ಕಳ್ಳತನ, ತೀವ್ರ ಸ್ವರೂಪದ ಸಿವಿಲ್‌ ಪ್ರಕರಣಗಳು ಇರುವ ಗ್ರಾಮಗಳಲ್ಲೂ ವಾಸ್ತವ್ಯ ಹೂಡಲು ಪೊಲೀಸರು ನಿರ್ಧರಿಸಿದ್ದಾರೆ.

ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವಾಸ್ತವ್ಯಕ್ಕೂ ಮೊದಲು ಗ್ರಾಮದ ಜನರಿಗೆ ಮಾಹಿತಿ ನೀಡಲಾಗುತ್ತದೆ. ಸಂಜೆ 7ರಿಂದ ರಾತ್ರಿ 9 ಗಂಟೆಯವರೆಗೆ ಗ್ರಾಮದಲ್ಲಿ ಸಭೆ ನಡೆಸಲಾಗುತ್ತದೆ. ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳು ಆಲಿಸಿ ಪರಿಹಾರ ಸೂಚಿಸಲಿದ್ದಾರೆ. ಎಸ್‌ಪಿ ಸೇರಿ ಪೊಲೀಸ್‌ ಅಧಿಕಾರಿಗಳು ಗ್ರಾಮದಲ್ಲಿ ಗಸ್ತು ತಿರುಗಲಿದ್ದಾರೆ.

ಪೊಲೀಸರು ಗ್ರಾಮಗಳಲ್ಲಿರುವ ಸರ್ಕಾರಿ ಶಾಲೆ, ಸಮುದಾಯ ಭವನ ಮುಂತಾದ ಸರ್ಕಾರಿ ಕಟ್ಟಡಗಳಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಆಯಾ ಗ್ರಾಮಗಳ ನಿವಾಸಿಗಳು ಇಷ್ಟಪಟ್ಟರೆ ಮನೆಗಳಲ್ಲೂ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಸ್ಥರೊಂದಿಗೆ ಊಟ ಸೇವಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಡ್ಯ ತಾಲ್ಲೂಕಿನಿಂದ ಆರಂಭ
ಪೊಲೀಸರ ಗ್ರಾಮ ವಾಸ್ತವ್ಯ ಜೂನ್‌ 10ರಿಂದ ಮಂಡ್ಯ ತಾಲ್ಲೂಕಿನಿಂದಲೇ ಆರಂಭವಾಗಲಿದೆ. ಅಧಿಕೃತ ಗ್ರಾಮಗಳ ಪಟ್ಟಿ ಭಾನುವಾರ ಹೊರಬೀಳಲಿದೆ. ಎಸ್‌ಪಿ ಶಿವಪ್ರಕಾಶ್‌ ದೇವರಾಜ್‌ ಮುಂದಿನ ವಾರದಲ್ಲಿ ಒಂದು ದಿನ ವಾಸ್ತವ್ಯ ಹೂಡಲಿದ್ದಾರೆ. ಗ್ರಾಮಗಳ ಪಟ್ಟಿ ಹೊರಬಂದ ನಂತರ ಸಿಬ್ಬಂದಿ ಅಧಿಕೃತವಾಗಿ ಗ್ರಾಮಗಳಿಗೆ ತೆರಳಿ ವಾಸ್ತವ್ಯದ ವಿವರ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

*
ಪೊಲೀಸರ ಕರ್ತವ್ಯ ನಿರ್ವಹಣೆ ಯಲ್ಲಿ ಜನರ ಸಹಕಾರ ಮುಖ್ಯ. ಜನಸ್ನೇಹಿ ವ್ಯವಸ್ಥೆ ಬಗ್ಗೆ ಜಾಗೃತಿ ಮೂಡಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ರೂಪಿಸಲಾಗಿದೆ.
-ಶಿವಪ್ರಕಾಶ್‌ ದೇವರಾಜ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.