
ನಾಗಮಂಗಲ: ‘ಮನಸ್ಸುಗಳ ಬೆಸುಗೆಯನ್ನು ಸಾಕ್ಷೀಕರಿಸುವ ಮಾಂಗಲ್ಯ ಧಾರಣೆಯೊಂದಿಗೆ ಶುರುವಾಗುವ ದಾಂಪತ್ಯ ಜೀವನದಲ್ಲಿ ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು’ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಮಠದ ಬಿಜಿಎಸ್ ಸಭಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ 10 ಜೋಡಿಗಳ ಸರಳ ವಿವಾಹ ಹಾಗೂ ಹಿರಿಯ ದಂಪತಿಗಳಿಗೆ ಗೌರವ ಸಮರ್ಪಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಗೃಹಸ್ಥಾಶ್ರಮ ಬಹಳ ಗಟ್ಟಿಯಾಗಿರುವ ನೆಲದಲ್ಲಿ ಮಾತ್ರ ಸಂಸ್ಕಾರ, ಸಂಸ್ಕೃತಿಯೂ ಭದ್ರವಾಗಿರುತ್ತದೆ. ಶ್ರೀಕ್ಷೇತ್ರದಲ್ಲಿ ವರ್ಷವಿಡೀ ಸರಳ ವಿವಾಹ ಮಹೋತ್ಸವ ನಡೆಯುತ್ತಿದ್ದರೂ ಭೈರವೈಕ್ಯ ಶ್ರೀಗಳ ಸಂಕಲ್ಪದಂತೆ ಜಾತ್ರಾ ಮಹೋತ್ಸವದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ’ ಎಂದರು.
ವಧು-ವರರಿಗೆ ಮಂತ್ರಾಕ್ಷತೆ ಹಾಕಿ ಫಲ ತಾಂಬೂಲ ನೀಡಿ ಶ್ರೀಗಳು ಹರಸಿದರು. ವಧುವಿಗೆ ಸೀರೆ, ರವಿಕೆ, ತಾಳಿ, ಕಾಲುಂಗುರ, ವರರಿಗೆ ಪೇಟ, ಪಂಚೆ, ಶರ್ಟ್ ವಿತರಿಸಿದರು.
ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥ ಸ್ವಾಮೀಜಿ, ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಪಾಂಡವಪುರದ ಪುಸ್ತಕಮನೆಯ ಎಂ. ಅಂಕೇಗೌಡ, ಇತಿಹಾಸ ತಜ್ಞ ಪ್ರೊ.ಕೆ. ಪುಟ್ಟರಂಗಪ್ಪ ಪಾಲ್ಗೊಂಡಿದ್ದರು.
ಹಿರಿಯ ದಂಪತಿಗಳಿಗೆ ಸನ್ಮಾನ
ವಿವಾಹವಾಗಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ದಂಪತಿಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ ಅವರು ಮೈಸೂರು ಪೇಟ ಶಾಲು ಹೊದಿಸಿ ಸನ್ಮಾನಿಸಿದರು. ಮಂಡ್ಯ ಹಾಸನ ಮೈಸೂರು ರಾಮನಗರ ಹಾಗೂ ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 260 ಹಿರಿಯ ದಂಪತಿಗಳು ಆಗಮಿಸಿದ್ದು ವಿಶೇಷವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.